ನವದೆಹಲಿ: ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ‘4PM ನ್ಯೂಸ್ ನೆಟ್‌ವರ್ಕ್’ ಡಿಜಿಟಲ್ ಮಾಧ್ಯಮದ ಸ್ವತಂತ್ರ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದೆಹಲಿ ಪೊಲೀಸರು ಠಾಣೆಯೊಳಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸಾಕೆತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದರು. ಈ ವೇಳೆ ಪತ್ರಕರ್ತೆಯರು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಸಾಕೆತ್ ಪೊಲೀಸ್ ಠಾಣೆಗೆ ಕರೆದೊಯ್ದ ನಂತರ, ಕೊಠಡಿಯೊಂದರಲ್ಲಿ ಇಬ್ಬರೂ ಪತ್ರಕರ್ತೆಯರ ಮೇಲೆ ಲಾಠಿ ಮತ್ತು ಕೈಗಳಿಂದ ತೀವ್ರ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ತಮ್ಮ ಧಾರ್ಮಿಕ ಗುರುತನ್ನು (ಮುಸ್ಲಿಂ identity) ಖಚಿತಪಡಿಸಿಕೊಂಡ ನಂತರವೇ ಪೊಲೀಸರು ಹಲ್ಲೆಯ ತೀವ್ರತೆಯನ್ನು ಹೆಚ್ಚಿಸಿದರು ಮತ್ತು ಧರ್ಮ ಸೂಚಕವಾಗಿ ನಿಂದಿಸಿದರು ಎಂದು ಶಾಹೀನ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ದೂರಿದ್ದಾರೆ. ಈ ವೀಡಿಯೊಗಳಲ್ಲಿ ಪತ್ರಕರ್ತೆಯರ ದೇಹದ ಮೇಲಿನ ಗಾಯದ ಗುರುತುಗಳು ಕಂಡುಬಂದಿವೆ.
ಪೋಲೀಸರ ಸ್ಪಷ್ಟನೆ:
ಈ ಆರೋಪಗಳನ್ನು ದೆಹಲಿ ಪೊಲೀಸ್ ಇಲಾಖೆಯು ಸಂಪೂರ್ಣವಾಗಿ ತಳ್ಳಿಹಾಕಿದೆ. ಸಾಕೆತ್ ಡಿಸಿಪಿ ಅನಂತ್ ಮಿತ್ತಲ್ ಹೇಳಿಕೆ ನೀಡಿ, “ವಿವಿಐಪಿ ಸಂಚಾರ ಮಾರ್ಗದಲ್ಲಿ ಸ್ಕೂಟರ್ ಪಾರ್ಕ್ ಮಾಡಿ ಸಂಚಾರಕ್ಕೆ ಅಡ್ಡಿಪಡಿಸಲಾಗಿತ್ತು. ವಾಹನ ತೆರವುಗೊಳಿಸಲು ಸೂಚಿಸಿದರೂ ನಿರಾಕರಿಸಿದ್ದರಿಂದ ತನಿಖೆಗೆಂದು ಠಾಣೆಗೆ ಕರೆತರಲಾಗಿತ್ತು. ಪ್ರಶ್ನೆ ಕೇಳಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂಬುದು ಆಧಾರರಹಿತ ಮತ್ತು ದಾರಿ ತಪ್ಪಿಸುವ ಆರೋಪ” ಎಂದಿದ್ದಾರೆ.
ರಾಜಕೀಯ ಮತ್ತು ಪತ್ರಿಕೋದ್ಯಮ ಸಂಘಟನೆಗಳ ಆಕ್ರೋಶ:
ಈ ಘಟನೆಯನ್ನು ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ (ಎಎಪಿ) ಸೇರಿದಂತೆ ವಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್ ಮುಂತಾದ ಪತ್ರಕರ್ತರ ಒಕ್ಕೂಟಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿ, ದೆಹಲಿ ಪೊಲೀಸ್ ಕಮಿಷನರ್ ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ.
- 4PM News Network
- Amit Shah
- CM Rekha Gupta
- DCP Anant Mittal
- Delhi Police assault
- Muslim journalists assault allegation
- Nafisa Khan
- Press Freedom India
- Saket Police Station
- Shaheen Khan
- ಅಮಿತ್ ಶಾ
- ದೆಹಲಿ ಪೊಲೀಸ್
- ಧಾರ್ಮಿಕ ತಾರತಮ್ಯ ಆರೋಪ
- ನಫೀಸಾ ಖಾನ್
- ಪತ್ರಿಕಾ ಒಕ್ಕೂಟ ಖಂಡನೆ
- ಮಹಿಳಾ ಪತ್ರಕರ್ತೆಯರ ಮೇಲೆ ಹಲ್ಲೆ
- ಮಾಧ್ಯಮ ಸ್ವಾತಂತ್ರ್ಯ
- ರೇಖಾ ಗುಪ್ತಾ
- ಶಾಹೀನ್ ಖಾನ್
- ಸಾಕೆತ್ ಪೊಲೀಸ್ ಠಾಣೆ





Leave a comment