ಮುಂಬೈ: “ನಾವು 21ನೇ ಶತಮಾನದಲ್ಲಿ ಚಂದ್ರನ ಮತ್ತೊಂದು ತುದಿಯನ್ನು ತಲುಪಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ, ನಮ್ಮ ದೇಶದಲ್ಲಿ ಇಂದಿಗೂ ಜಾತಿ ವ್ಯವಸ್ಥೆಯೆಂಬ ಸಾಮಾಜಿಕ ಪಿಡುಗು ಜೀವಂತವಾಗಿದ್ದು, ಮಾನವ ಘನತೆಗೆ ಕುಂದು ತರುವಂತಹ ಕೆಲಸಗಳನ್ನು ಮಾಡಲು ಜನರನ್ನು ಬಲವಂತಪಡಿಸಲಾಗುತ್ತಿದೆ” ಎಂದು ಮುಂಬೈ ಹೈಕೋರ್ಟ್ ತೀವ್ರ ಕಳವಳ ಮತ್ತು ಆಕ್ರೋಶ ವ್ಯಕ್ತಪಡಿಸಿದೆ.
ಅಪಾಯಕಾರಿ ಒಳಚರಂಡಿ ಮತ್ತು ಸಫಾಯಿ ಕೆಲಸಗಳ ಸಂದರ್ಭದಲ್ಲಿ ಕಾರ್ಮಿಕರು ಮೃತಪಟ್ಟರೆ, ಅವರಿಗೆ ನೀಡಬೇಕಾದ ಪರಿಹಾರದ ಜವಾಬ್ದಾರಿಯನ್ನು ಖಾಸಗಿ ಮಾಲೀಕರು ಹಾಗೂ ಹೌಸಿಂಗ್ ಸೊಸೈಟಿಗಳ ಮೇಲೆ ನೇರವಾಗಿ ಹೊರಿಸಿದ್ದ ಮಹಾರಾಷ್ಟ್ರ ಸರ್ಕಾರದ ನೀತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಭಾರತಿ ಡಂಗ್ರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.
ಹೈಕೋರ್ಟ್ ನೀಡಿದ ಪ್ರಮುಖ ಆದೇಶಗಳು:
ಸರ್ಕಾರವೇ ಮೊದಲು ಪರಿಹಾರ ನೀಡಬೇಕು: ಖಾಸಗಿ ಅಥವಾ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಯಾವುದೇ ಕಾರ್ಮಿಕ ಮಲ ಹೊರುವ ಅಥವಾ ಅಪಾಯಕಾರಿ ಶುಚಿಗೊಳಿಸುವ ಕೆಲಸದ ವೇಳೆ ಮೃತಪಟ್ಟರೆ, ಸರ್ಕಾರವೇ ತಕ್ಷಣವೇ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಹಣವನ್ನು ನೀಡಬೇಕು. ನಂತರ ಆ ಹಣವನ್ನು ಸಂಬಂಧಪಟ್ಟ ಖಾಸಗಿ ಮಾಲೀಕರಿಂದ ಸರ್ಕಾರ ವಸೂಲಿ ಮಾಡಿಕೊಳ್ಳಬಹುದು.
₹30 ಲಕ್ಷ ಪರಿಹಾರ: 2013ರ ‘ಮಲ ಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ’ಯಡಿ ಮೃತರಾದ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೂ ₹30 ಲಕ್ಷ ಪರಿಹಾರ ವಿತರಿಸಬೇಕು.
6 ತಿಂಗಳ ಗಡುವು: ಕಳೆದ ಅವಧಿಯಲ್ಲಿ ಅಪಾಯಕಾರಿ ಶುಚಿಗೊಳಿಸುವಿಕೆ ವೇಳೆ ಮೃತಪಟ್ಟ ಎಲ್ಲಾ ಸಫಾಯಿ ಕಾರ್ಮಿಕರನ್ನು ಗುರುತಿಸಲು ಸರ್ಕಾರಕ್ಕೆ 6 ತಿಂಗಳ ಕಾಲಾವಕಾಶ ನೀಡಲಾಗಿದೆ.
ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕನ್ನು ನೀಡಿದ್ದರೂ, 75 ವರ್ಷಗಳ ನಂತರವೂ ಈ ಸಾಮಾಜಿಕ ಅಸಮಾನತೆಯ ಪಿಡುಗಿನಿಂದ ದೇಶ ಮುಕ್ತವಾಗಿಲ್ಲದಿರುವುದು ಖೇದಕರ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.





Leave a comment