ತಿರುವನಂತಪುರಂ: ಮಹಿಳೆಯರು ಸಾರ್ವಜನಿಕ ರಂಗ ಪ್ರವೇಶಿಸಬಾರದು ಮತ್ತು ಮನೆಯಲ್ಲಿಯೇ ಇರಬೇಕು ಎಂಬ ತಮ್ಮ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಭಾರತದ ಗ್ರಾಂಡ್ ಮುಫ್ತಿ ಹಾಗೂ ಇಸ್ಲಾಮಿಕ್ ಪಂಡಿತ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಸ್ಪಷ್ಟನೆ ನೀಡಿದ್ದಾರೆ. ಇಸ್ಲಾಂ ಧರ್ಮವು ಮಹಿಳೆಯರಿಗೆ ದ್ವಿತೀಯ ಸ್ಥಾನ ನೀಡುತ್ತದೆ ಅಥವಾ ಅವರ ಹಕ್ಕುಗಳನ್ನು ಕಸಿಯುತ್ತದೆ ಎಂಬ ವಾದವನ್ನು ಅವರು ತಳ್ಳಿಹಾಕಿದ್ದಾರೆ.
ವಿವಾದದ ಹಿನ್ನೆಲೆ:
ಇತ್ತೀಚೆಗೆ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ್ದ ಕಾಂತಪುರಂ, “ಮಹಿಳೆಯರು ಸಾರ್ವಜನಿಕವಾಗಿ ಹೊರಬರುವುದು ಮಹಾ ವಿನಾಶಕ್ಕೆ ಕಾರಣವಾಗುತ್ತದೆ. ಕುರಾನ್ ಪ್ರಕಾರ ಮಹಿಳೆಯರು ಮನೆಗೆ ಸೀಮಿತವಾಗಿರಬೇಕು” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಮಹಿಳಾ ಸಂಘಟನೆಗಳು, ರಾಜಕೀಯ ನಾಯಕರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಕಾಂತಪುರಂ ನೀಡಿದ ಸ್ಪಷ್ಟನೆ:
ತಮ್ಮ ಮೇಲಿನ ಟೀಕೆಗಳಿಗೆ ಉತ್ತರಿಸಿದ ಅವರು, “ಇಸ್ಲಾಂ ಮಹಿಳೆಯರನ್ನು ಹೂತುಹಾಕುವ ಅಥವಾ ಹತ್ತಿಕ್ಕುವ ಧರ್ಮವಲ್ಲ. ನಾವು ನಡೆಸುತ್ತಿರುವ ಸಮಸ್ಥ ಕೆರಳ ಜಮಯ್ಯತುಲ್ ಉಲಮಾ ಸಂಸ್ಥೆಗಳ ಅಡಿಯಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತಿದೆ. ನೂರಾರು ಹೆಣ್ಣುಮಕ್ಕಳಿಗೆ ಉಚಿತ ಊಟ, ವಸತಿ ಹಾಗೂ ಶಿಕ್ಷಣ ನೀಡಿ ಅವರ ಸಬಲೀಕರಣಕ್ಕೆ ನೆರವಾಗುತ್ತಿದ್ದೇವೆ. ಹೀಗಿರುವಾಗ ನಾವು ಮಹಿಳಾ ವಿರೋಧಿಗಳು ಎನ್ನುವುದು ಸರಿಯಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.
ರಾಜಕೀಯ ನಾಯಕರ ಆಕ್ರೋಶ:
ವಿ.ಡಿ. ಸತೀಶನ್ (ಕೇರಳ ವಿಧಾನಸಭೆ ವಿಪಕ್ಷ ನಾಯಕ): ಕಾಂತಪುರಂ ಅವರ ಹೇಳಿಕೆಯನ್ನು ’19ನೇ ಶತಮಾನದ ಬಗೆಯ ಮುರಿದ ಆಲೋಚನೆ’ ಎಂದು ಕರೆದಿದ್ದಾರೆ. ಪ್ರವಾದಿ ಮುಹಮ್ಮದರ ಪತ್ನಿ ಖದೀಜಾ ಪ್ರಸಿದ್ಧ ಉದ್ಯಮಿಯಾಗಿದ್ದರು ಮತ್ತು ಆಯಿಶಾ ಯುದ್ಧದಲ್ಲಿ ಸೇನಾಧಿಪತಿಯಾಗಿದ್ದರು ಎಂಬುದನ್ನು ಉಲ್ಲೇಖಿಸಿ, ಆಧುನಿಕ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಂ.ಎ. ಬೇಬಿ (ಸಿಪಿಐ-ಎಂ ನಾಯಕ): ಈ ಹೇಳಿಕೆಯು ಲಿಂಗ ಸಮಾನತೆಗೆ ವಿರುದ್ಧವಾಗಿದ್ದು, ಸಂವಿಧಾನ ನೀಡಿದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕಿಡಿಕಾರಿದ್ದಾರೆ.





Leave a comment