ಚೆನ್ನೈ: ಉದ್ಯೋಗ ಅಥವಾ ವೈಯಕ್ತಿಕ ಕಾರಣಗಳಿಂದಾಗಿ ದಂಪತಿಗಳು ಎಲ್ಲಾ ಸಮಯದಲ್ಲಿಯೂ ಜೊತೆಯಲ್ಲೇ ವಾಸಿಸಲು ಸಾಧ್ಯವಿಲ್ಲ. ಪತಿ ಹೋದ ಕಡೆಯಲ್ಲೆಲ್ಲಾ ಪತ್ನಿ ಆತನನ್ನೇ ಅನುಸರಿಸಿಕೊಂಡು ಹೋಗಲು ವೋಡಾಫೋನ್ ಜಾಹೀರಾತಿನ ನಾಯಿ (Pug) ಅಲ್ಲ ಎಂದು ಮದ್ರಾಸ್ ಹೈಕೋರ್ಟ್ ಅತ್ಯಂತ ಸ್ವಾರಸ್ಯಕರ ಹಾಗೂ ಮಹತ್ವದ ವೀಕ್ಷಣೆ ಮಾಡಿದೆ.
ದೀರ್ಘಕಾಲದ ದಾಂಪತ್ಯ ಕಲಹದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಎಂ.ಡಿ. ಸುಮಾತಿ ಅವರನ್ನೊಳಗೊಂಡ ಪೀಠವು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ದಂಪತಿಯ 34 ವರ್ಷಗಳ ದಾಂಪತ್ಯವನ್ನು ರದ್ದುಗೊಳಿಸಿ (ವಿಚ್ಛೇದನ) ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
1992ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ನಾಲ್ವರು ಮಕ್ಕಳಿದ್ದು, ಕಳೆದ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತಿಯು ಉದ್ಯೋಗಕ್ಕಾಗಿ ತಮಿಳುನಾಡಿನ ಶಿವಗಂಗೈನಿಂದ ಮುಂಬೈಗೆ ತೆರಳಿದ್ದರು. ಈ ವೇಳೆ ಪತಿ ತನ್ನನ್ನು ಜೊತೆಯಲ್ಲಿ ಕರೆದೊಯ್ಯದೆ ಕರ್ತವ್ಯ ಲೋಪ ಎಸಗಿದ್ದಾರೆ ಮತ್ತು ಹೆಂಡತಿಯ ಅಕ್ರಮ ಸಂಬಂಧದ ಆರೋಪ ಆಧಾರರಹಿತ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೌಟುಂಬಿಕ ನ್ಯಾಯಾಲಯದ ತರ್ಕವನ್ನು ಒಪ್ಪದ ಹೈಕೋರ್ಟ್, “ಪತಿ ಉದ್ಯೋಗಕ್ಕಾಗಿ ಬೇರೆಡೆಗೆ ಹೋದ ತಕ್ಷಣವೇ ಪತ್ನಿಯನ್ನು ಕರೆದೊಯ್ಯಲು ಎಲ್ಲ ಪರಿಸ್ಥಿತಿಯಲ್ಲೂ ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಪತಿ ಯೋಧನಾಗಿದ್ದರೆ ಆತನನ್ನು ಬ್ಯಾರಾಕ್ಸ್‌ನಲ್ಲಿ ಕುಟುಂಬದೊಂದಿಗೆ ಇರಲು ಬಿಡುವುದಿಲ್ಲ. ಅಥವಾ ಪತ್ನಿಯೇ ಬೇರೆಡೆ ಕೆಲಸ ಮಾಡುತ್ತಿರಬಹುದು. ಆಕೆಯು ವೋಡಾಫೋನ್ ಜಾಹೀರಾತಿನ ಪಗ್ ನಾಯಿಯಂತೆ ಪತಿಯ ಹಿಂದೆಯೇ ಇರಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ವಿಚ್ಛೇದನ ಮಂಜೂರು: ಅದೇ ಸಮಯದಲ್ಲಿ, ಪತಿಯು ಪತ್ನಿಯ ಮೇಲೆ ಹೊರಿಸಿದ್ದ ಅಕ್ರಮ ಸಂಬಂಧದ (Adultery) ಆರೋಪವನ್ನೂ ಹೈಕೋರ್ಟ್ ತಳ್ಳಿಹಾಕಿತು. ಆದರೆ, ದಂಪತಿಗಳು ಕಳೆದ 16 ವರ್ಷಗಳಿಂದ ಸಂಪೂರ್ಣವಾಗಿ ಬೇರ್ಪಟ್ಟಿದ್ದು, ಸಂಬಂಧ ಸರಿಪಡಿಸಲಾಗದ ಹಂತಕ್ಕೆ ತಲುಪಿರುವುದರಿಂದ ವಿಚ್ಛೇದನ ನೀಡುವುದು ಸೂಕ್ತ ಎಂದು ತಿಳಿಸಿದೆ. ಜೊತೆಗೆ ಪತ್ನಿಯ ಜೀವನಾಂಶಕ್ಕಾಗಿ 7 ಲಕ್ಷ ರೂಪಾಯಿಗಳನ್ನು ಠೇವಣಿ ಇಡುವಂತೆ 67 ವರ್ಷದ ಪತಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.





Leave a comment