ಬೆಂಗಳೂರು: ಕನ್ನಡ ಹಾಡುಗಳ ಬೇಡಿಕೆಯನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಪ್ರಸಿದ್ಧ ಗಾಯಕ ಸೋನು ನಿಗಮ್ ಕರ್ನಾಟಕದ ಜನತೆಯಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಸದ್ದು ಮಾಡುತ್ತಿದ್ದು, ಇದು ಹಲವು ಗಾಯಕರು ಮತ್ತು ಸಂಗೀತ ನಿರ್ದೇಶಕರ ಹೆಸರು ದೇಶಾದ್ಯಂತ ರಾರಾಜಿಸುತ್ತಿದೆ.
ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:
ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತಾಡಿದರು. ತಾವು ಹಿಂದೆ ಮಾಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಅರ್ಥವಾಗಿದೆ. ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದರು.
ನಾನು ಹಿಂದೆಯೂ ಹೇಳಿದ್ದೇನೆ. ನಾವೆಲ್ಲರೂ ಸೋನು ನಿಗಮ್ ಅವರ ಹಾಡುಗಳನ್ನು ಇಷ್ಟಪಟ್ಟವರು. ಅವರ ಕುರಿತು ವೈಯಕ್ತಿಕವಾಗಿ ಯಾವ ದ್ವೇಷ,… pic.twitter.com/XqhOL2GuP8
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) October 19, 2026
ಒಂದು ಕಾಲದಲ್ಲಿ ಸೋನು ನಿಗಮ್ ಅವರಿಗೆ ಸಿಕ್ಕ ಅವಕಾಶ ಅಷ್ಟಿಷ್ಟಲ್ಲ. ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಸೇರಿದಂತೆ ಹೊಸ ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರು ಬಾಲಿವುಡ್, ಕಾಲಿವುಡ್, ಮಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಬೇರೆ ಭಾಷೆಯವರು ಇತ್ತ ನೋಡುವಂತೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕಾಂತಾರಾ, ಕಾಂತಾರ-1, ಕೆಜಿಎಫ್, ಕೆಜಿಎಫ್2, ಪ್ರೇಮದ ಊರಲಿ ಸೇರಿದಂತೆ ಹಲವು ಚಿತ್ರಗಳು ಸದ್ದು ಮಾಡಿದ್ದು, ಎಲ್ಲರನ್ನೂ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿವೆ.
ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿದ್ದಕ್ಕೆ 1,000 ಬಾರಿಯಾದರೂ ಕ್ಷಮೆ ಕೇಳಲು ಸಿದ್ಧ ಎಂದು ಹೇಳಿರುವ ಅವರು, ತಮ್ಮ ಹಾಗೂ ಕನ್ನಡಿಗರ ನಡುವಿನ ದಶಕಗಳ ಬಾಂಧವ್ಯವನ್ನು ಮುಂದುವರಿಸಲು ಮನವಿ ಮಾಡಿದ್ದಾರೆ. ಸೋನು ನಿಗಮ್ ಅವರ ಸ್ಪಷ್ಟನೆ ಮತ್ತು ಕ್ಷಮೆಯಾಚನೆಯ ನಂತರ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತನ್ನ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಘೋಷಿಸಿದೆ.
ಈ ವಿವಾದವು ಏಪ್ರಿಲ್ 2025 ರಲ್ಲಿ ಬೆಂಗಳೂರಿನ ಈಸ್ಟ್ ಪಾಯಿಂಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಪ್ರಾರಂಭವಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಆಗ್ರಹಿಸಿದ ಪ್ರೇಕ್ಷಕರ ವರ್ತನೆಯನ್ನು ಸೋನು ನಿಗಮ್ ಪಹಲ್ಗಾಮ್ ದಾಳಿಗೆ ಹೋಲಿಸಿ ಮಾತನಾಡಿದ್ದರು. ಇದರಿಂದ ಆಕ್ರೋಶಗೊಂಡ ಕರವೇ ಪೊಲೀಸರಿಗೆ ದೂರು ನೀಡಿ ಎಫ್ಐಆರ್ ದಾಖಲಿಸಿತ್ತು. ಇತ್ತೀಚೆಗೆ ಅಕ್ಟೋಬರ್ 24, 2026 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸೋನು ನಿಗಮ್ ಅವರ ಸಂಗೀತ ಕಚೇರಿಗೆ ಅನುಮತಿ ನೀಡದಂತೆ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ನಂತರ ಈ ವಿವಾದ ಮತ್ತೆ ಮುನ್ನೆಲೆಗೆ ಬಂದಿತ್ತು.
ಭಾವಪೂರ್ಣ ಕ್ಷಮೆಯಾಚನೆ: ಸೋನು ನಿಗಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡು, “ನನ್ನ ಕರ್ನಾಟಕ ಕುಟುಂಬಕ್ಕೆ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಪ್ರೀತಿಯ ಸಂಬಂಧ ಉಳಿಸಿಕೊಳ್ಳಲು 1000 ಬಾರಿ ಕ್ಷಮೆ ಕೇಳಲು ನಾಚಿಕೆ ಇಲ್ಲ” ಎಂದು ತಿಳಿಸಿದ್ದಾರೆ.
ಕರವೇ ಅಧ್ಯಕ್ಷರೊಂದಿಗೆ ಮಾತುಕತೆ: ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರೊಂದಿಗೆ ಸೋನು ನಿಗಮ್ ಸುದೀರ್ಘ ಹಾಗೂ ಗೌರವಪೂರ್ವಕ ಮಾತುಕತೆ ನಡೆಸಿ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಪ್ರತಿಭಟನೆ ವಾಪಸ್: ಸೋನು ನಿಗಮ್ ಅವರ ಕ್ಷಮೆಯಾಚನೆಯನ್ನು ಸ್ವೀಕರಿಸಿದ ಕರವೇ, ಅವರ ಸಂಗೀತ ಕಚೇರಿ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿದ ಟಿ.ಎ. ನಾರಾಯಣಗೌಡ ಅವರು, “ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ. ಘಂಟಸಾಲ, ಪಿ.ಬಿ. ಶ್ರೀನಿವಾಸ್, ಜೇಸುದಾಸ್, ಎಸ್. ಜಾನಕಿ ಮುಂತಾದ ಅನ್ಯಭಾಷಿಕ ಗಾಯಕರನ್ನು ಕನ್ನಡಿಗರು ಸದಾ ಗೌರವಿಸಿದ್ದಾರೆ. ಸೋನು ನಿಗಮ್ ಅವರು ತಮ್ಮ ತಪ್ಪಿನ ಅರಿವು ಮಾಡಿಕೊಂಡು ಕ್ಷಮೆ ಕೇಳಿರುವುದರಿಂದ ವಿವಾದವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.





Leave a comment