ಬೆಂಗಳೂರು: ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕುಗಳು ಸ್ಥಳೀಯ ಗ್ರಾಹಕರಿಗೆ ಕನ್ನಡದಲ್ಲೇ ಸೇವೆ ಒದಗಿಸಬೇಕು ಮತ್ತು ನೇಮಕಾತಿಯಲ್ಲಿ ಕನ್ನಡ ಬಲ್ಲ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ತೀವ್ರವಾಗಿ ಆಗ್ರಹಿಸಿದ್ದಾರೆ.
ಸೇವಾ ವಲಯದಲ್ಲಿ ಕನ್ನಡ ಬಳಕೆಯ ಕುರಿತು ಮಾತನಾಡಿದ ಸಚಿವರು, “ಕರ್ನಾಟಕದ ನೆಲದಲ್ಲಿ ಬ್ಯಾಂಕಿಂಗ್ ಅಥವಾ ಯಾವುದೇ ಸೇವೆ ಪಡೆಯುವಾಗ ಕನ್ನಡಿಗರು ಭಾಷಾ ಸಮಸ್ಯೆಯನ್ನು ಎದುರಿಸಬಾರದು. ಮಾತೃಭಾಷೆಯಲ್ಲಿ ಸೇವೆ ಪಡೆಯುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕು ಹಾಗೂ ಆತ್ಮಗೌರವದ ವಿಷಯವಾಗಿದೆ” ಎಂದು ತಿಳಿಸಿದರು.
ಇತ್ತೀಚೆಗೆ ‘ಬ್ಯಾಂಕ್ ಆಫ್ ಬರೋಡಾ’ ಸಂಸ್ಥೆಯು ಸ್ಥಳೀಯ ಭಾಷೆ ಬಲ್ಲ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾದ ನಿರ್ಧಾರವನ್ನು ಸ್ವಾಗತಿಸಿದ ಸಚಿವರು, ಈ ನಿಟ್ಟಿನಲ್ಲಿ ಸುದೀರ್ಘ ಹೋರಾಟ ನಡೆಸಿದ ಕನ್ನಡ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ಮಾದರಿಯನ್ನು ಕೇಂದ್ರ ಹಣಕಾಸು ಸಚಿವಾಲಯವು ಅನುಸರಿಸಬೇಕು ಮತ್ತು ಕರ್ನಾಟಕದಲ್ಲಿನ ಬ್ಯಾಂಕ್ ಹುದ್ದೆಗಳಿಗೆ ಕನ್ನಡ ಪ್ರಾವೀಣ್ಯತೆ ಹೊಂದಿರುವ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಆದ್ಯತೆ ನೀಡುವಂತೆ ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಬೇಕು ಎಂದು ಮನವಿ ಮಾಡಿದರು.
ಈ ನಡೆಯು ರಾಜ್ಯ ಸರ್ಕಾರದ ಕನ್ನಡ ಪ್ರಸಾರ ಅಭಿಯಾನದ ಭಾಗವಾಗಿದೆ. ಈಗಾಗಲೇ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಪ್ರದರ್ಶಿಸುವುದನ್ನು ಶಾಸನಬದ್ಧವಾಗಿ ಜಾರಿಗೆ ತರಲಾಗಿದೆ.





Leave a comment