ಲಕ್ನೋ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ಈ ಮಧ್ಯೆ, ಅಸಾದುದ್ದೀನ್ ಓವೈಸಿ ನೇತೃತ್ವದ AIMIM ಪಕ್ಷಕ್ಕೆ ದೊಡ್ಡ ಮಟ್ಟದ ರಾಜಕೀಯ ಆಘಾತ ಎದುರಾಗಿದೆ.
ಪಕ್ಷದ ಪ್ರಮುಖ ರಾಷ್ಟ್ರೀಯ ವಕ್ತಾರ ಹಾಗೂ ಹಿರಿಯ ನಾಯಕ ಸೈಯದ್ ಅಸೀಮ್ ವಕಾರ್ ಅವರು ಎಐಎಂಐಎಂ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.
ಒಂದು ದಶಕದ ಒಡನಾಟಕ್ಕೆ ವಿದಾಯ:
ಸೈಯದ್ ಅಸೀಮ್ ವಕಾರ್ ಅವರು ಕಳೆದ ಸುಮಾರು 10 ವರ್ಷಗಳಿಂದ ಒವೈಸಿ ಅವರೊಂದಿಗೆ ಗುರುತಿಸಿಕೊಂಡಿದ್ದರು. ಟಿವಿ ಚಾನೆಲ್ ಚರ್ಚೆಗಳು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಪಕ್ಷದ ಪ್ರಮುಖ ಧ್ವನಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಪಕ್ಷದ ಉತ್ತರ ಪ್ರದೇಶ ಘಟಕದ ಕೆಲವು ಕಾರ್ಯವೈಖರಿ ಹಾಗೂ ನಿರ್ಧಾರಗಳ ಬಗ್ಗೆ ಅವರು ತೀವ್ರ ಅಸಮಾಧಾನಗೊಂಡಿದ್ದರು ಎಂದು ಹೇಳಲಾಗಿದೆ. ಎಐಎಂಐಎಂ ಸೇರುವ ಮುನ್ನ ಅವರು ಸಮಾಜವಾದಿ ಪಕ್ಷದಲ್ಲಿ ಸುಮಾರು 20 ವರ್ಷಗಳ ಕಾಲ ರಾಜಕೀಯ ಅನುಭವ ಹೊಂದಿದ್ದರು.
ಕಾಂಗ್ರೆಸ್-ಸಮಾಜವಾದಿ ಪಕ್ಷದ ಮೈತ್ರಿಗೆ ಬಲ:
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆಯನ್ನು ಎದುರಿಸಲು ಸಿದ್ಧತೆ ನಡೆಸುತ್ತಿವೆ. ಅಂತಹ ಸಂದರ್ಭದಲ್ಲಿ, ಪ್ರಭಾವಿ ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಕಾಂಗ್ರೆಸ್ ಸೇರುತ್ತಿರುವುದು ಇಂಡಿಯಾ ಮೈತ್ರಿಕೂಟದ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಇಡೀ ರಾಜಕೀಯ ಬೆಳವಣಿಗೆಯ ಹಿಂದೆ ಕಾಂಗ್ರೆಸ್ ನಾಯಕ ಇಮ್ರಾನ್ ಪ್ರತಾಪ್‌ಘರ್ಬಿ ಅವರ ರಣತಂತ್ರವಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಒವೈಸಿಯ ‘ಮಿಷನ್ ಯುಪಿ’ಗೆ ಪೆಟ್ಟು:
ಉತ್ತರ ಪ್ರದೇಶದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಲು ಮತ್ತು ಕೇವಲ ‘ಮತ-ಕತ್ತರಿ’ ಮಾಡುವ ಪಕ್ಷ ಎಂಬ ಅಪಖ್ಯಾತಿಯನ್ನು ಹೋಗಲಾಡಿಸಲು ಒವೈಸಿ ರಾಜ್ಯಾದ್ಯಂತ ತೀವ್ರ ಪ್ರವಾಸ ಕೈಗೊಂಡಿದ್ದಾರೆ. ಇಂತಹ ನಿರ್ಣಾಯಕ ಸಮಯದಲ್ಲಿ ಪಕ್ಷದ ಪ್ರಮುಖ ಮುಖವೇ ಕೈಕೊಟ್ಟು ಬೇರೆ ಪಕ್ಷಕ್ಕೆ ಸೇರುತ್ತಿರುವುದು ಒವೈಸಿಯವರ ಚುನಾವಣಾ ರಣತಂತ್ರಕ್ಕೆ ದೊಡ್ಡ ತಡೆಯಾಗಲಿದೆ.





Leave a comment