ದಾವಣಗೆರೆ: ಪದೇ ಪದೇ ದಾವಣಗೆರೆಗೆ ಬಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅಶಾಂತಿ ಸೃಷ್ಟಿಸುತ್ತಿದ್ದು, ಈ ಹಿಂದೆ ಸೋನಿಯಾ ನಾರಂಗ್ ಅವರು ಎಸ್ಪಿ ಆಗಿದ್ದಾಗ ಅನುಮತಿ ಇಲ್ಲದೇ ರಸ್ತೆ ತಡೆ ನಡೆಸಿದ್ದಕ್ಕೆ ಠಾಣೆಗೆ ಕರೆದೊಯ್ದು ಬಟ್ಟೆ ಬಿಚ್ಚಿಸಿ ಕೂರಿಸಿದ ರೀತಿಯಲ್ಲಿ ಮತ್ತೆ ಕ್ರಮ ಆಗಬೇಕು. ಇದೇ ಧೋರಣೆ ಮುಂದುವರಿಸಿದರೆ ಪೊಲೀಸರು ಮತ್ತೊಮ್ಮೆ ರೇಣುಕಾಚಾರ್ಯ ಬಟ್ಟೆ ಬಿಚ್ಚಿಸಿ ಠಾಣೆಯಲ್ಲಿ ಕೂರಿಸಬೇಕು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಬಂದ್ ಸಂಪೂರ್ಣ ವಿಫಲ ಆಗಿದೆ. ಮುಲಾಜಿಲ್ಲದೇ ರೇಣುಕಾಚಾರ್ಯ ಅಂಡ್ ಟೀಂ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ದಾವಣಗೆರೆಗೆ ಬರೋದು ಟೈರ್ ಸುಡೋದು, ಬಂದ್ ನಡೆಸುವುದು, ಟ್ರಾಫಿಕ್ ಜಾಮ್ ಮಾಡುವಂಥ ಕೃತ್ಯದಲ್ಲಿ ರೇಣುಕಾಚಾರ್ಯ ತೊಡಗುತ್ತಿದ್ದು, ಪೊಲೀಸರು ಯಾವ ಕಾರಣಕ್ಕೂ ಸಹಾನುಭೂತಿ ತೋರಿಸದೇ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ದಾವಣಗೆರೆಯಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿದೆ. ರೇಣುಕಾಚಾರ್ಯ ಇಲ್ಲಿಗೆ ಬಂದು ಹಾಳು ಮಾಡುತ್ತಿದ್ದಾರೆ. ಅನುಮತಿ ಪಡೆಯದೇ ಪ್ರತಿಭಟನೆ ನಡೆಸೋದು, ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಬಂದ್ ಗೆ ಹೊಟೇಲ್, ಅಂಗಡಿಗಳ ಮಾಲೀಕರು, ಛೇಂಬರ್ ಆಫ್ ಕಾಮರ್ಸ್ ಅವರು ವಿರೋಧ ವ್ಯಕ್ತಪಡಿಸಿದರೂ ದಾವಣಗೆರೆ ಬಂದ್ ನಡೆಸಲಾಗುತ್ತಿದೆ. ಕಾರ್ಯಕರ್ತರ ಎದುರು ದೊಡ್ಡಸ್ಥಿಕೆ ತೋರಿಸಿಕೊಳ್ಳಲು ರೇಣುಕಾಚಾರ್ಯ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ನೂರಾರು ಗುಂಪುಗಳಿವೆ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರಿ, ಬಿ. ಪಿ. ಹರೀಶ್, ರೇಣುಕಾಚಾರ್ಯ ಬಣ ಸೇರಿದಂತೆ ಹಲವು ಗುಂಪುಗಳಿದ್ದು ಪ್ರತಿಷ್ಠೆಗೋಸ್ಕರ ಪ್ರತಿಭಟನೆ, ಬಂದ್ ನಡೆಸಲಾಗುತ್ತದೆ. ಕೇವಲ ಎರಡು ಗುಂಪುಗಳಲ್ಲ, ನೂರಾರು ಗುಂಪುಗಳಿವೆ. ಬಿಜೆಪಿ ಹೈಕಮಾಂಡ್ ಇವರ ಮಾತಿಗೆ ಸೊಪ್ಪು ಹಾಕುತ್ತಿಲ್ಲ ಎಂದು ದಿನೇಶ್ ಕೆ. ಶೆಟ್ಟಿ ಹೇಳಿದರು.
ಗೋಷ್ಠಿಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್, ನಿಖಿಲ್ ಮತ್ತಿತರರು ಹಾಜರಿದ್ದರು.





Leave a comment