ಕಿರ್ಗಿಸ್ತಾನ್: ರಾಜಧಾನಿ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ 26ನೇ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯು ಜಾಗತಿಕ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಚೀನಾ, ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದನೆ ಹಾಗೂ ಪ್ರಾದೇಶಿಕ ಭದ್ರತೆಯ ಕುರಿತು ಭಾರತದ ಗಟ್ಟಿಯಾದ ನಿಲುವನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ.
ಭಯೋತ್ಪಾದನೆ ವಿರುದ್ಧ ರಾಜಿ ಇಲ್ಲದ ಹೋರಾಟ
ಶೃಂಗಸಭೆಯ ಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ದ್ವಂದ್ವ ನೀತಿ (Double Standards) ಅನುಸರಿಸಬಾರದು ಎಂದು ಸ್ಪಷ್ಟಪಡಿಸಿದರು. ಭಯೋತ್ಪಾದನೆಯನ್ನು ತಮ್ಮ ರಾಷ್ಟ್ರೀಯ ನೀತಿಯ ಸಾಧನವಾಗಿ ಬಳಸಿಕೊಳ್ಳುವ ಹಾಗೂ ಉಗ್ರರಿಗೆ ಆಶ್ರಯ ನೀಡುವ ದೇಶಗಳಿಗೆ ಕಠಿಣ ಸಂದೇಶ ರವಾನಿಸಬೇಕು ಎಂದ ಅವರು, “ಭಯೋತ್ಪಾದನೆಯು ಯಾರಿಗೂ ಎಂದಿಗೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ” ಎಂದು ಬಲವಾಗಿ ಪ್ರತಿಪಾದಿಸಿದರು.
ಜಾಗತಿಕ ಬಿಕ್ಕಟ್ಟುಗಳು ಮತ್ತು ಗ್ಲೋಬಲ್ ಸೌತ್
ಇಂದಿನ ಪರಸ್ಪರ ಸಂಪರ್ಕ ಹೊಂದಿರುವ ಜಗತ್ತಿನಲ್ಲಿ ಭದ್ರತೆಯ ಪರಿಧಿಯು ಅತ್ಯಂತ ವಿಸ್ತಾರವಾಗಿದೆ ಎಂದು ಅಭಿಪ್ರಾಯಪಟ್ಟ ಮೋದಿ, ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳು ಕೇವಲ ಆ ಪ್ರದೇಶಕ್ಕೆ ಸೀಮಿತವಾಗಿರದೆ ಇಡೀ ವಿಶ್ವದ ಇಂಧನ ಭದ್ರತೆ, ಕಡಲ ವ್ಯಾಪಾರ ಹಾಗೂ ಸರಬರಾಜು ಸರಪಣಿಯ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ ಎಂದರು. ಅಂತಹ ಸಂಘರ್ಷಗಳ ಭಾರವನ್ನು ‘ಗ್ಲೋಬಲ್ ಸೌತ್ ರಾಷ್ಟ್ರಗಳು ಅತಿ ಹೆಚ್ಚು ಹೊರಬೇಕಾಗುತ್ತಿದ್ದು, ಯುದ್ಧಗಳ ಪರಿಹಾರ ರಣರಂಗದಲ್ಲಲ್ಲ, ಬದಲಿಗೆ ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಸಾಧ್ಯ ಎಂದು ಭಾರತ ಪುನರುಚ್ಚರಿಸಿದೆ.
ನಾರ್ಕೋ-ಟೆರರಿಸಮ್ ಮತ್ತು ಸಂಪರ್ಕ ಜಾಲಕ್ಕೆ ಒತ್ತು
ಯುವ ಪೀಳಿಗೆಯನ್ನು ಮತ್ತು ಪ್ರಾದೇಶಿಕ ಭದ್ರತೆಯನ್ನು ಧನಾತ್ಮಕವಾಗಿ ಕಾಪಾಡಲು ಡ್ರಗ್ಸ್ ಕಳ್ಳಸಾಗಣೆ (ಮಾದಕ ದ್ರವ್ಯ ಜಾಲ) ಹಾಗೂ ಸಂಘಟಿತ ಅಪರಾಧಗಳ ವಿರುದ್ಧ ಎಲ್ಲ ರಾಷ್ಟ್ರಗಳು ಒಗ್ಗೂಡಿ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಮೋದಿ ಕರೆ ನೀಡಿದರು. ಅಲ್ಲದೆ, ದೇಶಗಳ ನಡುವಿನ ವ್ಯಾಪಾರ ಮತ್ತು ಸಂಪರ್ಕ ಜಾಲ ವಿಸ್ತರಣೆಯಾಗಬೇಕು ನಿಜ, ಆದರೆ ಆ ಪ್ರಕ್ರಿಯೆಗಳುಯಾವತ್ತೂ ಆಯಾ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ನೀಡುವಂತಿರಬೇಕು ಎಂದು ಎಚ್ಚರಿಸಿದರು.





Leave a comment