ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯು ಮತ್ತಷ್ಟು ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಫಲಾನುಭವಿಗಳ ಬಯೋಮೆಟ್ರಿಕ್ ಮತ್ತು ಮುಖ ಚಹರೆ ದೃಢೀಕರಣ (ಫೇಸ್ ಆಥೆಂಟಿಕೇಶನ್) ಮೂಲಕ ಮರುಪರಿಶೀಲನೆ ನಡೆಸಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಫಲಾನುಭವಿಗಳು ಮರಣ ಹೊಂದಿದ, ವಲಸೆ ಹೋದ ಹಾಗೂ ಐ.ಟಿ ಮತ್ತು ಜಿ.ಎಸ್.ಟಿ ತೆರಿಗೆ ಪಾವತಿಸಿರುವ ಅನರ್ಹ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಅನರ್ಹರನ್ನು ಕೈಬಿಟ್ಟು, ನೈಜ ಅರ್ಹ ಫಲಾನುಭವಿಗಳಿಗೆ ಮಾತ್ರ ಸಕಾಲದಲ್ಲಿ ಸೌಲಭ್ಯ ಮುಂದುವರಿಸಲು ಈ ವಿಶೇಷ ಮರುಪರಿಶೀಲನಾ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಮನೆ ಮನೆಗೆ ಭೇಟಿ ನೀಡಲಿವೆ ವಿಶೇಷ ತಂಡಗಳು:
ಫಲಾನುಭವಿಗಳ ಮರುಪರಿಶೀಲನೆಯನ್ನು ‘ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ಸ್ ಸರ್ವಿಸಸ್’ (EDCS) ನಿರ್ದೇಶನಾಲಯ ಅಭಿವೃದ್ಧಿಪಡಿಸಿದ ವೆಬ್/ಮೊಬೈಲ್ ಆಪ್ ಮೂಲಕ ನಡೆಸಲಾಗುತ್ತದೆ.
ಗ್ಯಾರಂಟಿ ಸಮಿತಿ ಸದಸ್ಯರು ಮತ್ತು ಸರ್ಕಾರಿ ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಲಿದ್ದಾರೆ.
ಫಲಾನುಭವಿಗಳು ನಮೂನೆಯನ್ನು ಭರ್ತಿ ಮಾಡಿ ಅದೇ ಭೇಟಿಯ ಸಮಯದಲ್ಲಿ ಹಿಂತಿರುಗಿಸಬೇಕು.
ಸಿಬ್ಬಂದಿಗಳು ಸ್ಥಳದಲ್ಲೇ ಫಲಾನುಭವಿಯ ಫೋಟೋ, ಜಿ.ಪಿ.ಎಸ್ (GPS) ನಿರ್ದೇಶಾಂಕಗಳು, ಮುಖದ ದೃಢೀಕರಣ ಹಾಗೂ ಮತದಾರರ ಗುರುತಿನ ಚೀಟಿ (EPIC) ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳಲಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಸಂಪೂರ್ಣ ಪ್ರಕ್ರಿಯೆಯನ್ನು ಒಂದು ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಆಡಳಿತಾತ್ಮಕ ಜವಾಬ್ದಾರಿಯನ್ನುಹೊಂದಿದೆ.
ಪರ್ಯಾಯ ವ್ಯವಸ್ಥೆ ಏನು?
ಮನೆ ಭೇಟಿಯ ವೇಳೆ ಮುಖ ದೃಢೀಕರಣ ವಿಫಲವಾದರೆ ಅಥವಾ ಲಭ್ಯವಿಲ್ಲದಿದ್ದರೆ, ಹತ್ತಿರದಲ್ಲಿರುವ ನ್ಯಾಯಬೆಲೆ ಅಂಗಡಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಬಯೋಮೆಟ್ರಿಕ್ ಪೂರ್ಣಗೊಳಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಜುಲೈ 1 ರ ನಂತರ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿರುವ ಬಯೋಮೆಟ್ರಿಕ್ ದತ್ತಾಂಶವನ್ನೂ ಆಹಾರ ಇಲಾಖೆಯಿಂದ ಪಡೆದು ಪರಿಶೀಲಿಸಲಾಗುತ್ತದೆ.
- Biometric Verification
- EDCS App
- Face Authentication
- Gruha lakshmi re verification
- Gruha Lakshmi Scheme
- Ineligible Beneficiaries
- Karnataka Government
- Karnataka News
- Women and Child Development Department
- ಕರ್ನಾಟಕ ಸರ್ಕಾರ
- ಗೃಹಲಕ್ಷ್ಮಿ ಯೋಜನೆ
- ಗ್ಯಾರಂಟಿ ಯೋಜನೆಗಳು
- ಬಯೋಮೆಟ್ರಿಕ್ ಪರಿಶೀಲನೆ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
- ಮುಖ ಚಹರೆ ದೃಢೀಕರಣ





Leave a comment