Home ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ‘ಸಂಕಲ್ಪ 2026’: ಬಿ.ವೋಕ್ ವಿದ್ಯಾರ್ಥಿಗಳ ದಿಕ್ಸೂಚಿ ಕಾರ್ಯಕ್ರಮ ಸಂಪನ್ನ
ದಾವಣಗೆರೆನವದೆಹಲಿಬೆಂಗಳೂರು

ಜಿಎಂ ವಿಶ್ವವಿದ್ಯಾಲಯದಲ್ಲಿ ‘ಸಂಕಲ್ಪ 2026’: ಬಿ.ವೋಕ್ ವಿದ್ಯಾರ್ಥಿಗಳ ದಿಕ್ಸೂಚಿ ಕಾರ್ಯಕ್ರಮ ಸಂಪನ್ನ

Share
ವಿಶ್ವವಿದ್ಯಾಲಯ
Share

ದಾವಣಗೆರೆ: ನಗರದ ಜಿಎಂ ವಿಶ್ವವಿದ್ಯಾಲಯದ ಆವರಣದಲ್ಲಿನ ಪಾಲಿಟೆಕ್ನಿಕ್‌ ನ ಹೊಸ ಕಟ್ಟಡದಲ್ಲಿರುವ ಸೆಮಿನಾರ್ ಹಾಲ್‌ನಲ್ಲಿ ಪ್ರಥಮ ವರ್ಷದ ಬಿ.ವೋಕ್ (B.Voc) ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಸಂಕಲ್ಪ 2026’ (SANKALPA 2026) ದಿಕ್ಸೂಚಿ ಕಾರ್ಯಕ್ರಮವು (Orientation Programme) ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಮುಖ್ಯ ಅತಿಥಿಗಳಾಗಿದ್ದ ಜಿಎಂಯು ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್ ಮಾತನಾಡಿ, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ನಂತರ ವಿದ್ಯಾರ್ಥಿಗಳು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂಬ ಸದಾಶಯದೊಂದಿಗೆ ಜಿಎಂಯು ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರ ಕನಸಿನ ಪ್ರಯತ್ನವೇ ಬಿ.ವೋಕ್ ಕಾರ್ಯಕ್ರಮವಾಗಿದೆ. ಇತರೆ ಮಹಾನಗರಗಳಲ್ಲಿ ದುಬಾರಿಯಾಗಿರುವ ಈ ರೀತಿಯ ವೃತ್ತಿಪರ ಕೋರ್ಸ್‌ಗಳು ಸ್ಥಳೀಯ ವಿದ್ಯಾರ್ಥಿಗಳಿಗೆ ದಾವಣಗೆರೆಯಲ್ಲೇ ಅತ್ಯಂತ ಕೈಗೆಟುಕುವ ವೆಚ್ಚದಲ್ಲಿ ದೊರೆಯುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಾಹನ ತಂತ್ರಜ್ಞಾನ (EV Technology) ಮತ್ತು ಫ್ಯಾಷನ್ ಡಿಸೈನಿಂಗ್ (Fashion Design) ಕ್ಷೇತ್ರಗಳಿಗೆ ಅಪಾರ ಬೇಡಿಕೆಯಿದ್ದು, ನುರಿತ ತಾಂತ್ರಿಕ ಸಿಬ್ಬಂದಿಯ ಅಗತ್ಯವಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಎಂಯು ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರು, ಬಿ.ವೋಕ್ ಕೋರ್ಸ್ ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ಮಾನ್ಯತೆ ಪಡೆದ 3 ವರ್ಷಗಳ ಉದ್ಯೋಗಾಧಾರಿತ ಪದವಿಯಾಗಿದೆ. ಈ ಕೋರ್ಸ್‌ನಲ್ಲಿ ಶೇ. 40 ರಷ್ಟು ಸಿದ್ಧಾಂತ (Theory) ಮತ್ತು ಶೇ. 60 ರಷ್ಟು ಪ್ರಾಯೋಗಿಕ/ಇಂಡಸ್ಟ್ರಿಯಲ್ ತರಬೇತಿ ಇರಲಿದೆ. ಪದವಿಯ ನಂತರ M.Voc, MBA, M.Sc ಮಾಡಬಹುದು ಹಾಗೂ IAS, KAS, ಬ್ಯಾಂಕಿಂಗ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅರ್ಹತೆ ಸಿಗುತ್ತದೆ. ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಳ್ಳಲು ಮತ್ತು ಸ್ವಂತ ಉದ್ಯಮ ಪ್ರಾರಂಭಿಸಲು ಬಿ.ವೋಕ್ ಅತ್ಯುತ್ತಮ ಆಯ್ಕೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತ್ ಮೋಟಾರ್ – EV ಸಿಇಓ ಅಫ್ಶಾನ್ ಅಹಮದ್, ಫ್ಯಾಷನ್ ಡಿಸೈನರ್ ಮತ್ತು ಸ್ಟೈಲಿಸ್ಟ್ ಪೃಥ್ವಿ ಎಂ ಮುಖ್ಯ ಅತಿಥಿಗಳಾಗಿದ್ದ ಆಗಮಿಸಿದ್ದರು. ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ, ವೃತ್ತಿಪರ ತರಬೇತಿ ಶಾಲೆಯ ನಿರ್ದೇಶಕರಾದ ಡಾ. ಬಿ.ಆರ್. ಶ್ರೀಧರ್, ಕಾರ್ಯಕ್ರಮ ಸಂಯೋಜಕರಾದ ಎಸ್.ಯು. ಸುರೇಶ್ ಬಾಬು, ಮೌನೇಶ್ ಡಿ, ಪ್ರೀತಿ ಬಿ.ಪಿ, ಜನಾರ್ಧನ ಕೆ.ಬಿ ಸೇರಿದಂತೆ ಬಿ. ವೋಕ್ ಶಿಬಿರಾರ್ಥಿಗಳು, ವಿಭಾಗದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles