ನೋಯ್ಡಾ: ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಿರ್ಜನ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಕುಲದೀಪ್ (39) ಹಾಗೂ ನಿರ್ವಾಹಕ ಸಂದೀಪ್ (26) ಎಂಬುವವರನ್ನು ದೆಹಲಿಯ ತಿಮಾರ್ಪುರ್ ವಲಯದ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಮನೆಯಲ್ಲಿ ಓದುವ ವಿಚಾರವಾಗಿ ತಾಯಿ ಬೈದಿದ್ದಕ್ಕೆ ಮನನೊಂದ ಬಾಲಕಿ, ಮೇನ್ಪುರಿಯಿಂದ ನೋಯ್ಡಾದಲ್ಲಿರುವ ತನ್ನ ಸೋದರಮಾವನ ಮನೆಗೆ ಯಾರಿಗೂ ತಿಳಿಸದೆ ಹೊರಟಿದ್ದಳು. ಆದರೆ ದಾರಿಯಲ್ಲಿ ತೀವ್ರ ಮಳೆ ಹಾಗೂ ರಾತ್ರಿ ಕತ್ತಲಿನ ಕಾರಣದಿಂದ ಪಾರಿ ಚೌಕ್ನಲ್ಲಿ ತಪ್ಪಾಗಿ ಕೆಳಗಿಳಿದಿದ್ದಾಳೆ. ಗಮ್ಯಸ್ಥಾನ ತಲುಪಲು ಪರದಾಡುತ್ತಿದ್ದ ಆಕೆಗೆ ನೋಯ್ಡಾ ಸೆಕ್ಟರ್ 63ರಡೆಗೆ ಹೋಗುವುದಾಗಿ ನಂಬಿಸಿ ಖಾಲಿ ಸ್ಲೀಪರ್ ಬಸ್ನ ಸಿಬ್ಬಂದಿ ಹತ್ತಿಸಿಕೊಂಡಿದ್ದರು.
ಕೃತ್ಯ ಎಸಗಿ ಪರಾರಿ:
ಬಸ್ ಹೊರಟ ತಕ್ಷಣವೇ ನಿರ್ವಾಹಕ ಅನುಚಿತವಾಗಿ ವರ್ತಿಸಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿ ಬಸ್ನಲ್ಲೇ ಬಾಲಕಿ ಮೇಲೆ ಅತ್ಯಾಚಾರವೆಂದಿದ್ದಾರೆ. ಅಲ್ಲದೆ ಯಾರಿಗಾದರೂ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ದೆಹಲಿಯ ಕಾಶ್ಮೀರ ಗೇಟ್ ಬಳಿ ಬಾಲಕಿಯನ್ನು ನಡುಪಾದೆಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಸಂತ್ರಸ್ತೆ ಧೈರ್ಯ ಮಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಹಾಗೂ ಫೋರೆನ್ಸಿಕ್ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಸ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.





Leave a comment