ದಾವಣಗೆರೆ: ಅಡಿಕೆಯನ್ನು ಕೇವಲ ಗುಟ್ಕಾ ಹಾಗೂ ಪಾನ್ ಮಸಾಲಾಗಳಲ್ಲಿ ಬಳಸುವುದಕ್ಕೆ ಸೀಮಿತಗೊಳಿಸದೆ, ಅದರಲ್ಲಿರುವ ಅತ್ಯಮೂಲ್ಯ ಔಷಧೀಯ ಗುಣಗಳಾದ ಆಂಟಿ-ಕ್ಯಾನ್ಸರ್, ಆಂಟಿ-ಡಯಾಬಿಟಿಕ್, ಆಂಟಿ-ಫಂಗಲ್, ಆಂಟಿ-ಇನ್ಫ್ಲಮೇಟರಿ, ಆಂಟಿ-ಏಜಿಂಗ್ ಮತ್ತು ಆಂಟಿ-ಬ್ಯಾಕ್ಟೀರಿಯಲ್ ಅಂಶಗಳ ಕುರಿತು ಆಳವಾದ ಸಂಶೋಧನೆ ನಡೆಸಬೇಕಿದೆ. ಈ ವೈಜ್ಞಾನಿಕ ಸಂಶೋಧನೆಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ‘ನೆಕ್ಸ್ ಲೈಫ್’ ಸಂಸ್ಥೆ ಸಿದ್ಧವಾಗಿದೆ ಎಂದು ಖಡ್ಗ ಸಂಘಟನೆ ಅಧ್ಯಕ್ಷ ರಘು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಬದಲಿಗೆ ಕ್ಯಾನ್ಸರ್ ನಿವಾರಕ ಗುಣಗಳನ್ನು ಹೊಂದಿದೆ ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಿ, ಕೇಂದ್ರ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗೆ (WHO) ಶೀಘ್ರವೇ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನ ಹರಿಸಲು ಮನವಿ:
ಅಡಿಕೆಯಿಂದ ಅಡಿಕೆ ಸಿರಪ್, ಹರ್ಬಲ್ ಡ್ರಿಂಕ್, ಅರೆಕಾ ಟೀ, ಸಾಬೂನು, ಶ್ಯಾಂಪೂ, ಚಾಕೊಲೇಟ್ ಮತ್ತು ಉಪ್ಪಿನಕಾಯಿ ಮುಂತಾದ ಉತ್ಪನ್ನಗಳನ್ನು ತಯಾರಿಸಲು ತೋಟಗಾರಿಕಾ ಸಂಸ್ಥೆಗಳು ಮುಂದಾಗಬೇಕು. ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡಬೇಕೆಂದು ಕ್ಯಾಂಪ್ಕೋ (CAMPCO) ಹಾಗೂ ವಿವಿಧ ರೈತ ಸಂಘ-ಸಂಸ್ಥೆಗಳಿಗೆ ವಿನಂತಿಸಲಾಗಿದೆ ಎಂದರು.
ಸರ್ಕಾರದ ನೀತಿಗಳ ವೈರೋಧ್ಯಾಭಾಸ:
ಒಂದೆಡೆ ಅಡಿಕೆ ತೋಟಗಳ ಅಭಿವೃದ್ಧಿಗೆ ಸಸಿ, ಹನಿ ನೀರಾವರಿ ಹಾಗೂ ರೋಗಗಳ ನಿಯಂತ್ರಣಕ್ಕೆ ಸಬ್ಸಿಡಿ ನೀಡುವ ಸರ್ಕಾರಗಳು, ಇನ್ನೊಂದೆಡೆ ಅಡಿಕೆ ಉತ್ಪನ್ನಗಳನ್ನು ಬಹಿಷ್ಕರಿಸುವ ನಿಲುವು ತಳೆಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧಿಸುವ ಸರ್ಕಾರದ ಹೆಜ್ಜೆ ಸ್ವಾಗತಾರ್ಹವಾಗಿದ್ದು, ಅದೇ ರೀತಿಯಲ್ಲಿ ಜನಸಮುದಾಯದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಮದ್ಯಪಾನ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಯುವಶಕ್ತಿಯನ್ನು ಮುಕ್ತಗೊಳಿಸಬೇಕು ಎಂಬುದು ಸುಶಿಕ್ಷಿತ ನಾಗರಿಕ ಸಮಾಜದ ಆಶಯವಾಗಿದೆ ಎಂದು ಹೇಳಿದರು.
- alternative arecanut products
- areca tea
- arecanut farmers support
- arecanut medicinal research
- arecanut value addition
- campco
- Gutka Ban
- horticulture research
- nex life
- tobacco products ban
- ಅಡಿಕೆ
- ಅಡಿಕೆ ಬೆಳೆಗಾರರು
- ಅಡಿಕೆ ಶಾಂಪೂ
- ಅಡಿಕೆ ಸಂಶೋಧನೆ
- ಅರೆಕಾ ಟೀ
- ಔಷಧೀಯ ಗುಣಗಳು
- ಕ್ಯಾಂಪ್ಕೋ
- ಗುಟ್ಕಾ ನಿಷೇಧ
- ತಂಬಾಕು ನಿಷೇಧ
- ತೋಟಗಾರಿಕೆ
- ನೆಕ್ಸ್ ಲೈಫ್
- ಮೌಲ್ಯವರ್ಧನೆ





Leave a comment