SUDDIKSHANA KANNADA NEWS/ DAVANAGERE/ DATE:05-02-2025
ದಾವಣಗೆರೆ: ಮಾಧ್ಯಮಗಳ ಹೆಸರೇಳಿಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ನಕಲಿ ಪತ್ರಕರ್ತರ ಹಾವಳಿಯನ್ನು ತಡೆಗಟ್ಟುವಂತೆ ಕೋರಿ ಬುಧವಾರ ಜಿಲ್ಲಾ ವರದಿಗಾರರ ಕೂಟದ ಸದಸ್ಯರು ಜಿಲ್ಲಾಧಿಕಾರಿಗೆ ಮತ್ತು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾಪ್ರಭುತ್ವದ 4ನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿಕೊಂಡು, ನಾವೆಲ್ಲಾ ಬದುಕು ಕಟ್ಟಿಕೊಂಡಿದ್ದೇವೆ. ಕ್ಷೇತ್ರದಲ್ಲಿ ನಾಲ್ಕೈದು ದಶಕದಿಂದ ಸೇವೆ ಸಲ್ಲಿಸುವವರಿದ್ದು, ಆದರೆ ಕಳೆದ ಕೆಲ ವರ್ಷದಿಂದಲೂ ಮಾಧ್ಯಮ ವೃತ್ತಿಗೆ, ವೃತ್ತಿ ಬಾಂಧವರ ಹೆಸರಿಗೆ ಮಸಿ ಬಳಿಯುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಪತ್ರಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡಿದಾಳ್ ಮಾತನಾಡಿ, ಮಾಧ್ಯಮಗಳ ಹೆಸರು ಹೇಳುತ್ತಲೇ ಬಡ್ಡಿ ವ್ಯವಹಾರ ಮಾಡುವವರು, ಕಾನೂನು ಬಾಹಿರ ಕೆಲಸ ಮಾಡುವವರು, ಇಸ್ಪೀಟ್ ಜೂಜಾಟ ಆಡಿಸುವವರು, ರಿಯಲ್ ಎಸ್ಟೇಟ್ ದಂಧೆಯವರು, ಗ್ಯಾರೇಜ್, ಮೆಕ್ಯಾನಿಕ್‌ಗಳು, ಆಟೋ ರಿಕ್ಷಾಗಳು, ಪ್ರಿಂಟಿಂಗ್ ಪ್ರೆಸ್‌ನವರು, ಸರಕು ಸಾಗಾಣಿಕೆ ವಾಹನಗಳ ಮೇಲೆ ಪ್ರೆಸ್, ಮೀಡಿಯಾ ಎಂಬುದಾಗಿ ಬರೆಸಿಕೊಂಡು ಸುತ್ತಾಡುತ್ತಿದ್ದು, ಇದರಿಂದ ನೈಜ ಮಾಧ್ಯಮದವರಿಗೆ ನಿರಂತರ ತೊಂದರೆಯಾಗುತ್ತಲೇ ಇದೆ. ಪ್ರೆಸ್, ಮೀಡಿಯಾ ಎಂಬುದಾಗಿ ಇರುವ ವಾಹನಗಳನ್ನೇ ಮೊದಲು ತಪಾಸಣೆ ಮಾಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ತಮ್ಮ ಅಧೀನ ಅಧಿಕಾರಿ, ಸಿಬ್ಬಂದಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿಯನ್ನು ಹಾಕಿ, ತಾವು ಪತ್ರಕರ್ತರೆಂದು ಅಧಿಕಾರಿ, ಸಿಬ್ಬಂದಿಗಳನ್ನು ಹೆದರಿಸುವ, ಬೆದರಿಸುವ ಕೆಲಸವೂ ಆಗುತ್ತಿದೆ. ಹಣ ವಸೂಲಿ ಮಾಡುವುದೇ ಇವರ ಉದ್ದೇಶವಾಗಿದ್ದು, ಇಂತಹವರಿಮದಾಗಿ ನೈಜವಾಗಿ ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿ, ಅರ್ಜಿ ಸಲ್ಲಿಸುವ ನೈಜ ಪತ್ರಕರ್ತರಿಗೂ ಸಂಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ವ್ಯವಹಾರ ಕುದುರಿಸಲು ಆರ್‌ಟಿಐನಲ್ಲಿ ಮಾಹಿತಿ ಕೋರಿದ್ದಾರೆಂಬ ವ್ಯಂಗ್ಯದ ಮಾತು ಕೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮೊದಲು ತಪ್ಪಿಸುವಂತೆ ಮನವಿ ಮಾಡಿದರು.
ಕೆಲವು ನಿರ್ಧಿಷ್ಟ ಪೊಲೀಸ್ ಠಾಣೆಗಳಲ್ಲಿ ರಾಜಿ ಪಂಚಾಯಿತಿ, ಕೊಡು- ತೆಗೆದುಕೊಳ್ಳುವ ವ್ಯವಹಾರಗಳಲ್ಲೂ ಮಾಧ್ಯಮದವರ ಹೆಸರನ್ನು ಸೇರಿಸಲಾಗುತ್ತಿದೆ. ಇದನ್ನು ಡಿಸಿ, ಎಸ್ಪಿಯವರು ಗಂಭೀರವಾಗಿ ಪರಿಗಣಿಸಿ, ಜಿಲ್ಲಾದ್ಯಂತ ಎಲ್ಲಾ ಪೊಲೀಸ್ ಅಧಿಕಾರಿ, ಠಾಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ತಡೆಯಲು ನಿರ್ದೇಶನ ನೀಡಬೇಕು. ಅಲ್ಲದೇ, ನಕಲಿ ಪತ್ರಕರ್ತರ ಸುಲಿಗೆ, ವಸೂಲಿ, ತಿಂಗಳ ಮಾಮೂಲಿ, ವರ್ಷದ ಮಾಮೂಲಿ, ಹಬ್ಬದ ಖುಷಿಗೆ ಅಂತೆಲ್ಲಾ ಊರ ತುಂಬಾ ಸುಳ್ಳು ಹೇಳಿಕೊಂಡು ಸುತ್ತಾಡುವ ದಂಧೆಕೋರರಿಗೂ ಅಂತಿಮ ಎಚ್ಚರಿಕೆ ನೀಡುವಂತೆ ಮನವಿ ಮಾಡಿದರು.
ದಾವಣಗೆರೆ ನಗರ, ಜಿಲ್ಲೆಯ ಪತ್ರಿಕೋದ್ಯಮ, ಇಲ್ಲಿನ ಪತ್ರಕರ್ತರಿಗೆ ಅವರದ್ದೇ ಆದ ಗೌರವ, ಘನತೆ ಇದೆ. ಯಾವುದೋ ಸಂಸ್ಥೆ ಹೆಸರು ಹೇಳಿಕೊಂಡು, ವಸೂಲಿ ಮಾಡುವ ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಲು ಮನವಿ. ಆಕಸ್ಮಾತ್ ನಾವು
ಸೇರಿದಂತೆ ಯಾರಾದರೂ ನೈಜ ಪತ್ರಕರ್ತರು ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ನಿಮ್ಮಗಳ ಬಳಿ ದಾಖಲೆ ಇದ್ದರೆ ಕಾನೂನು ಪ್ರಕಾರ, ನಿಮ್ಮ ವಿವೇಚನೆ ಪ್ರಕಾರ ಕ್ರಮ ಕೈಗೊಂಡು, ನಕಲಿ ಪತ್ರಕರ್ತರ ಹಾವಳಿಗೆ ಕಡಿವಾಣ ಹಾಕಬೇಕೆಂದು
ಕೋರಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಹದಿನೈದು ದಿನಗಳೊಳಗಾಗಿ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ
ನೀಡಿದರು.
ಈ ಸಂದರ್ಭದಲ್ಲಿ ಕೂಟದ ಗೌರವಾಧ್ಯಕ್ಷರಾದ ಬಿ.ಎನ್. ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಖಜಾಂಚಿ ಪವನ್ ಕುಮಾರ್, ಹಿರಿಯ ಪತ್ರಕರ್ತರಾದ ಎ.ಎಲ್. ತಾರಾನಾಥ್, ಮಂಜುನಾಥ್ ಗೌರಕ್ಕಳವರ್, ಚಂದ್ರಣ್ಣ, ಸಿದ್ದಯ್ಯ ಹಿರೇಮಠ್, ರಮೇಶ್ ಜಹಗೀರ್‌ದಾರ್, ಆರ್.ಟಿ. ತಿಪ್ಪೇಸ್ವಾಮಿ, ಸಿಕಂದರ್, ರವಿ ಬಾಬು, ಹೆಚ್.ಎಂ.ಪಿ. ಕುಮಾರ್, ಸಿ. ವರದರಾಜ್, ತೇಜಸ್ವಿನಿ, ಕಾವ್ಯ ಬಿಕೆ., ಸುರೇಶ್ ಕುಣಿಬೆಳಕೆರೆ, ಪುನೀತ್ ಆಪ್ತಿ, ತೇಜಸ್ವಿನಿ, ಸಂಜಯ್ ಕುಂದುವಾಡ, ರಮೇಶ್, ಶಿವುಕುಮಾರ್, ಕಿರಣ್, ಮದನ್, ಸುರೇಶ್ ಕಕ್ಕರಗೊಳ್ಳ ಸೇರಿದಂತೆ ಮತ್ತಿತರರಿದ್ದರು.