ಬೆಂಗಳೂರು: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ವಾಟ್ಸಾಪ್ ವೀಡಿಯೋ ಕಾಲ್ ತುಣುಕನ್ನು ಜಾಲತಾಣಗಳಲ್ಲಿ ವೈರಲ್ ಮಾಡಿ, ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮಹಿಳಾ ಅಧಿಕಾರಿಯೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ರೌಡಿಶೀಟರ್‌ಗಳಾದ ಧರ್ಮ ಹಾಗೂ ಸಾಯಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅವರು ದೂರು ಸಲ್ಲಿಸಿದ್ದು, ಪ್ರಕರಣ ಸ್ಫೋಟಕ ತಿರುವು ಪಡೆದುಕೊಂಡಿದೆ.
ಕೆಲವರು ಮಹಿಳಾ ಅಧಿಕಾರಿ ಪರ ಮಾತನಾಡಿದರೆ, ಮತ್ತೆ ಕೆಲವರು ಇಲಾಖೆಯ ಮಾನ ಮರ್ಯಾದೆ ಕಳೆದಿರುವ ಇಂಥ ಅಧಿಕಾರಿಯನ್ನು ವಜಾಗೊಳಿಸಬೇಕು. ಸಸ್ಪೆಂಡ್ ಮಾಡಿದರೆ ಸಾಲದು, ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳದೇ ಖಾಯಂ ಆಗಿ ಮನೆಗೆ ಕಳುಹಿಸಿ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರಂತೂ ಬಟ್ಟೆ ಬಿಚ್ಚಿದ ಮಹಿಳಾ ಪೊಲೀಸ್ ಅಧಿಕಾರಿ ವಿಡಿಯೋ ರೆಕಾರ್ಡ್ ಮತ್ತು ವೈರಲ್ ಮಾಡಿದವರ ಹಿಂದೆ ದೊಡ್ಡವರ ಕೈವಾಡವಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಮೆಟ್ರೋ ನಿಲ್ದಾಣದ ಭದ್ರತಾ ಉಸ್ತುವಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈ ಮಹಿಳಾ ಅಧಿಕಾರಿ, ತಮಗೆ ಮದುವೆಯಾಗಿ ಮಕ್ಕಳಿದ್ದು ಸಮಾಜದಲ್ಲಿ ಒಳ್ಳೆಯ ಹೆಸರಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ತಾವು ರೌಡಿಶೀಟರ್ ಧರ್ಮ ಜೊತೆ ಆಪ್ತತೆ ಹೊಂದಿದ್ದಾಗ ಆತನ ಜೊತೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಬಳಿಕ ಆ ವೀಡಿಯೋವನ್ನು ಮತ್ತೊಬ್ಬ ರೌಡಿಶೀಟರ್ ಸಾಯಿಕುಮಾರ್‌ಗೆ ನೀಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಸಿ ತಮ್ಮ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದು, ಜೈಲಿನಲ್ಲಿದ್ದ ಕೈದಿಗೆ ಮೊಬೈಲ್ ಫೋನ್ ತಲುಪಿದ್ದು ಹೇಗೆ ಹಾಗೂ ಇದರ ಹಿಂದೆ ಪ್ರಭಾವಿ ಜಾಲ ಕೆಲಸ ಮಾಡುತ್ತಿದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.





Leave a comment