ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ಐಫೋನ್ ಇಎಂಐ (EMI) ಕಂತು ಪಾವತಿಸುವ ವಿಚಾರವಾಗಿ ಕುಟುಂಬದಲ್ಲಿ ನಡೆದ ಸಣ್ಣ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದುಕೊಂಡು, ಅಂತಿಮವಾಗಿ ಇಡೀ ಕುಟುಂಬವೇ ದುರಂತವಾಗಿ ಕೊನೆಯಾದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ.
ಸಂಭವಿಸಿದ್ದು ಏನು?
19 ವರ್ಷದ ಕುನಾಲ್ ಚಾಂದಗುಡೆ ಎಂಬ ಯುವಕ ಇತ್ತೀಚೆಗೆ ಐಫೋನ್ ಖರೀದಿಸಿದ್ದ. ಅದರ ತಿಂಗಳ ಇಎಂಐ ಕಂತು ಕಟ್ಟಲು ತಂದೆಯಿಂದ ಹಣ ಕೇಳಿದ್ದಾನೆ. ಈ ವಿಷಯವಾಗಿ ತಂದೆ ಮುರ್ಲಿಧರ್ ಚಾಂದಗುಡೆ ಹಾಗೂ ಕುನಾಲ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಇದರಿಂದ ಕೋಪಗೊಂಡ ಕುನಾಲ್ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ವಾಲುಜ್ ಎಂಐಡಿಸಿ ಪೊಲೀಸ್ ಠಾಣೆ ವ್ಯಾಪ್ತಿಯ ತಿಸ್ಗಾಂವ್ ಬಳಿಯಿರುವ ಬೆಟ್ಟಕ್ಕೆ ತೆರಳಿ ಅಲ್ಲಿಂದ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾನೆ.
3 ಗಂಟೆಗಳ ಕಾಲ ನಡೆದ ಮನವೊಲಿಕೆ:ವಿಷಯ ತಿಳಿದ ತಂದೆ ಮುರ್ಲಿಧರ್ ಹಾಗೂ ತಾಯಿ ಸಂಗೀತಾ, ಸ್ಥಳೀಯರೊಂದಿಗೆ ತಕ್ಷಣವೇ ಬೆಟ್ಟದ ಬಳಿ ಧಾವಿಸಿದ್ದಾರೆ.
ಸುಮಾರು 3 ಗಂಟೆಗಳ ಕಾಲ ಆತನನ್ನು ಕೆಳಗೆ ಬರುವಂತೆ ತಾಯಿ ಹಾಗೂ ಗ್ರಾಮಸ್ಥರು ಗೋಗರೆದು ಬೇಡಿಕೊಂಡಿದ್ದಾರೆ. “ನಿನ್ನ ತಾಯಿಯನ್ನಾದರೂ ನೋಡು, ನಿರ್ಧಾರ ಬದಲಿಸು” ಎಂದು ಮನವಿ ಮಾಡಿದರೂ ಕುನಾಲ್ ತನ್ನ ಪಟ್ಟು ಸಡಿಲಿಸಲಿಲ್ಲ.
ಕ್ಷಣಮಾತ್ರದಲ್ಲಿ ನಡೆದ ಘೋರ ದುರಂತ:ಮಧ್ಯಾಹ್ನ 1 ಗಂಟೆಯ ಸುಮಾರಿಗೆ, ಮಗನನ್ನು ರಕ್ಷಿಸಲು ತಂದೆ ಮುರ್ಲಿಧರ್ ಮೆಲ್ಲನೆ ಆತನ ಹತ್ತಿರಕ್ಕೆ ತೆರಳಿ ಹಿಂದೆ ಜಗ್ಗಲು ಯತ್ನಿಸಿದರು. ಈ ವೇಳೆ ನಿಯಂತ್ರಣ ತಪ್ಪಿದ ಇಬ್ಬರೂ ಬೆಟ್ಟದ ಮೇಲಿಂದ ಆಳವಾದ ಕಂದಕಕ್ಕೆ ಬಿದ್ದಿದ್ದಾರೆ.
ಕಣ್ಣೆದುರಲ್ಲೇ ಗಂಡ ಮತ್ತು ಮಗ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ತಾಯಿ ಸಂಗೀತಾ ಕೂಡ ತಕ್ಷಣವೇ ಬೆಟ್ಟದಿಂದ ಜಿಗಿದಿದ್ದಾರೆ. ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.





Leave a comment