Home ಕ್ರೈಂ ನ್ಯೂಸ್ ತ್ರಿವಳಿ ತಲಾಖ್ ಬಳಿಕ ಬಹುಪತ್ನಿತ್ವಕ್ಕೂ ಬೀಳುತ್ತಾ ಬ್ರೇಕ್? ಮುಸ್ಲಿಂ ವೈಯಕ್ತಿಕ ಕಾನೂನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ತ್ರಿವಳಿ ತಲಾಖ್ ಬಳಿಕ ಬಹುಪತ್ನಿತ್ವಕ್ಕೂ ಬೀಳುತ್ತಾ ಬ್ರೇಕ್? ಮುಸ್ಲಿಂ ವೈಯಕ್ತಿಕ ಕಾನೂನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್!

Share
ತ್ರಿವಳಿ ತಲಾಖ್
Share

ನವದೆಹಲಿ: ತ್ರಿವಳಿ ತಲಾಖ್ ಪದ್ಧತಿಯನ್ನು ರದ್ದುಗೊಳಿಸಿದ ಸುಮಾರು ಒಂಬತ್ತು ವರ್ಷಗಳ ನಂತರ, ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಬಹುಪತ್ನಿತ್ವ (Polygamy) ಮತ್ತು ‘ನಿಕಾಹ್ ಹಲಾಲಾ’ (Nikah Halala) ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪುನರಾರಂಭಿಸಿದೆ. ಈ ಕುರಿತು ತನ್ನ ನಿಲುವನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಸಮಾನತೆಯ ಹಕ್ಕಿನ ಉಲ್ಲಂಘನೆ:

ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 82 ರ ಪ್ರಕಾರ ಮೊದಲ ಪತ್ನಿ ಜೀವಂತವಾಗಿರುವಾಗ ಎರಡನೇ ಮದುವೆಯಾಗುವುದು ಅಪರಾಧವಾಗಿದ್ದು, 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, 1937 ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಮುಸ್ಲಿಂ ಪುರುಷರಿಗೆ ನಾಲ್ಕು ಮದುವೆಯಾಗಲು ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿಯು ಸಂವಿಧಾನದ ವಿಧಿ 14 (ಸಮಾನತೆ), 15 (ಲೈಂಗಿಕ ತಾರತಮ್ಯ ನಿಷೇಧ) ಮತ್ತು 21 (ಬದುಕುವ ಹಕ್ಕು) ರ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಅರ್ಜಿದಾರರ ಪ್ರಮುಖ ಬೇಡಿಕೆಗಳು:

ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಬಹುಪತ್ನಿತ್ವಕ್ಕೆ ನೀಡಲಾಗಿರುವ ವಿನಾಯಿತಿಯನ್ನು ರದ್ದುಗೊಳಿಸಿ, BNS ಸೆಕ್ಷನ್ 82 ಅನ್ನು ಎಲ್ಲಾ ಧರ್ಮದ ನಾಗರಿಕರಿಗೂ ಸಮಾನವಾಗಿ ಅನ್ವಯಿಸಬೇಕು.

ರಹಸ್ಯ ಎರಡನೇ ಮದುವೆಗಳನ್ನು ತಡೆಯಲು ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಾಧಿಕಾರಗಳಲ್ಲಿ ನೋಂದಣಿ ಮಾಡಿಸಬೇಕು.

ಮುಸ್ಲಿಂ ವೈಯಕ್ತಿಕ ಕಾನೂನನ್ನು ಕ್ರೋಡೀಕರಿಸಿ ಲಿಂಗ ಸಮಾನತೆಗೆ ಆದ್ಯತೆ ನೀಡುವಂತೆ ಕಾನೂನು ಆಯೋಗ ಅಥವಾ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.

ಧಾರ್ಮಿಕ ಗ್ರಂಥ ಮತ್ತು ಆಚರಣೆ:

ಪವಿತ್ರ ಕುರಾನ್‌ನ ಸುರಾ ಅನ್-ನಿಸಾ (4:3) ಉಲ್ಲೇಖಿಸಿರುವ ಅರ್ಜಿದಾರರು, ಬಹುಪತ್ನಿತ್ವವು ಇಸ್ಲಾಂ ಧರ್ಮದ ಕಡ್ಡಾಯ ಆಚರಣೆಯಲ್ಲ (Essential Religious Practice), ಬದಲಾಗಿ ನಿರ್ದಿಷ್ಟ ಐತಿಹಾಸಿಕ ಸಂದರ್ಭಗಳಲ್ಲಿ ನೀಡಲಾಗಿದ್ದ ಷರತ್ತುಬದ್ಧ ಅನುಮತಿಯಾಗಿದೆ. ಟರ್ಕಿ, ಟುನೀಶಿಯಾ, ಈಜಿಪ್ಟ್ ಮತ್ತು ಪಾಕಿಸ್ತಾನದಂತಹ ಮುಸ್ಲಿಂ ಬಾಹುಳ್ಯದ ದೇಶಗಳಲ್ಲೂ ಬಹುಪತ್ನಿತ್ವದ ಮೇಲೆ ಕಾನೂನುಬದ್ಧ ನಿಷೇಧ ಅಥವಾ ಕಟ್ಟುನಿಟ್ಟಿನ ನಿಯಂತ್ರಣಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಲಾಗಿದೆ.

ಈ ಹಿಂದೆ 2017 ರಲ್ಲಿ ತ್ರಿವಳಿ ತಲಾಖ್ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಬಹುಪತ್ನಿತ್ವದ ವಿಷಯವನ್ನು ನಿರ್ಧರಿಸದೆ ಕಾಯ್ದಿರಿಸಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್‌ನ ಸಂವಿಧಾನಿಕ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಲಿದ್ದು, ಲಿಂಗ ನ್ಯಾಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನಡುವಿನ ಸುದೀರ್ಘ ಚರ್ಚೆಗೆ ಇದು ಹೊಸ ತಿರುವು ನೀಡುವ ನಿರೀಕ್ಷೆಯಿದೆ.

Share

Leave a comment

Leave a Reply

Your email address will not be published. Required fields are marked *

Related Articles