ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಪ್ರಮುಖ ಸರ್ಕಾರಿ ಸಾಕ್ಷಿಯೊಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರಿನ ವಿಶೇಷ ನ್ಯಾಯಾಲಯವು ಸಿಐಡಿ (CID) ತನಿಖೆಗೆ ಆದೇಶಿಸಿದೆ.
ಹಾಸನ ಜಿಲ್ಲೆಯ 43 ವರ್ಷದ ಸಮಾಜ ಸೇವಕಿ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿ, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ನಂತರ ತಮಗೆ ಹಾಗೂ ತಮ್ಮ ಮಗನಿಗೆ ಅಜ್ಞಾತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಜುಲೈ 6ರಂದು ನಡೆದ ಕ್ರಾಸ್ ಎಕ್ಸಾಮಿನೇಷನ್ ವೇಳೆ ತಿಳಿಸಿದ್ದಾರೆ. “ನಮಗೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಆರೋಪಿಗಳೇ ನೇರ ಹೊಣೆ” ಎಂದು ಸಾಕ್ಷಿ ಆತಂಕ ವ್ಯಕ್ತಪಡಿಸಿದ್ದಾರೆ.
ಸಾಕ್ಷಿಯ ಹೇಳಿಕೆಯನ್ನು ಪುರಸ್ಕರಿಸಿದ ನ್ಯಾಯಪೀಠ, ಈ ಕುರಿತು ವಿಸ್ತೃತ ತನಿಖೆ ನಡೆಸಿ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸುವಂತೆ ಅಪರಾಧ ತನಿಖಾ ದಳದ (CID) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ (ADGP) ನಿರ್ದೇಶನ ನೀಡಿದೆ. ಅಲ್ಲದೆ ಸಾಕ್ಷಿ ಮತ್ತು ಅವರ ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆ ಆದೇಶಿಸಿದೆ. ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಿಂದ ಮೊಬೈಲ್ ಫೋನ್, ಚಾರ್ಜರ್ ಮತ್ತು ಪೆನ್ ಡ್ರೈವ್ ವಶಪಡಿಸಿಕೊಳ್ಳಲಾಗಿತ್ತು.





Leave a comment