ಬೆಂಗಳೂರು: ಹದಿಮೂರು ವರ್ಷಗಳ ಹಿಂದೆ ತಾವು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಾಗ ತಮಗೆ ‘ಪತ್ರಿಕಾಧರ್ಮ’ದ ಪಾಠ ಹೇಳಿದ್ದ ಹಿರಿಯ ಪತ್ರಕರ್ತರು ಹಾಗೂ ವಿಮರ್ಶಕರೇ ಇಂದು ವಿಧಾನಸೌಧದಲ್ಲಿ ಹುದ್ದೆಗಳಿಗಾಗಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪತ್ರಕರ್ತರು ಶಾಶ್ವತ ವಿರೋಧಪಕ್ಷಗಳ ನಾಯಕರಂತೆ ಕಾರ್ಯಾಚರಿಸಬೇಕು ಮತ್ತು ರಾಜಕೀಯ ಪಕ್ಷದ ವಕ್ತಾರರಂತೆ ಕೆಲಸ ಮಾಡುವುದು ವೃತ್ತಿಗೆ ಎಸಗುವ ದ್ರೋಹ ಎಂದು ಅಂದು ಕಳವಳ ವ್ಯಕ್ತಪಡಿಸಿದ್ದವರೇ ಇಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಕಚೇರಿಗಳ ಮುಂದೆ ಮಾಧ್ಯಮ ಸಲಹೆಗಾರರಾಗಲು ಅರ್ಜಿ ಹಿಡಿದು ನಿಂತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಮಾಧ್ಯಮ ಸಂಸ್ಥೆಗಳ ರಾಜಕೀಯ ಮಾಲೀಕತ್ವ ಹಾಗೂ ಪತ್ರಕರ್ತರ ಇಬ್ಬಂದಿ ನಿಲುವನ್ನು ಪ್ರಶ್ನಿಸಿರುವ ಅವರು, ಹಿರಿಯ ಪತ್ರಕರ್ತ ಖಾದ್ರಿ ಶಾಮಣ್ಣನವರು ವಿಧಾನಪರಿಷತ್ ಸದಸ್ಯರಾದ ನಂತರವೂ ‘ಕನ್ನಡಪ್ರಭ’ ಪತ್ರಿಕೆಯ ಸಂಪಾದಕರಾಗಿ ಮುಂದುವರಿದಿದ್ದ ಐತಿಹಾಸಿಕ ನಿದರ್ಶನವನ್ನು ನೆನಪಿಸಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ ಸಿದ್ಧಾಂತ ಹಾಗೂ ವೃತ್ತಿಧರ್ಮದ ವ್ಯಾಖ್ಯಾನಗಳು ಕಾಲಕ್ಕೆ ತಕ್ಕಂತೆ ಹೇಗೆ ಬದಲಾಗುತ್ತವೆ ಎಂಬುದಕ್ಕೆ ಈ ಬೆಳವಣಿಗೆಗಳು ಹಿಡಿದ ಕೈಗನ್ನಡಿಯಾಗಿವೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.





Leave a comment