ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ದ್ರೋಹ ಮತ್ತು ಕೊಲೆಯ ಭೀಕರ ಘಟನೆಯೊಂದು ವರದಿಯಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತನೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಘಟನೆಯ ಸಂಪೂರ್ಣ ವಿವರ:
ಪಾಮೇನಹಳ್ಳಿ ಗ್ರಾಮದ ನಿವಾಸಿ ರಘು (36) ಕೊಲೆಯಾದ ದುರ್ದೈವಿ. ರಘು ಹಾಗೂ ಶೃತಿ ಕಳೆದ 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘು ಕುಡಿತದ ಚಟ ಹೊಂದಿದ್ದ ಕಾರಣ, ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಮಧ್ಯೆ ಶೃತಿಗೆ ಉಬೇದುಲ್ಲಾ ಎಂಬಾತನೊಂದಿಗೆ ಕಳೆದ 2-3 ವರ್ಷಗಳಿಂದ ಅಕ್ರಮ ಸಂಬಂಧ ಬೆಳೆದಿತ್ತು. ಗಂಡನೊಂದಿಗೆ ಸಂಸಾರ ಮಾಡಲು ಕಿರಿಕಿರಿ ಎನಿಸಿದಾಗ ಶೃತಿ, ಪ್ರಿಯಕರ ಉಬೇದುಲ್ಲಾನೊಂದಿಗೆ ಸೇರಿ ರಘುವನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ.
ಸಾಕ್ಷ್ಯ ನಾಶ ಮತ್ತು ಪ್ರಕರಣ ಬಯಲು:
ಕೊಲೆಯ ನಂತರ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿ ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದರು. ನಂತರ ಏನೂ ತಿಳಿಯದಂತೆ ಪತಿ ಕಾಣೆಯಾಗಿದ್ದಾನೆ ಎಂದು ಶೃತಿ ನಾಟಕವಾಡಿ ದೂರು ನೀಡಿದ್ದಳು. ಆದರೆ ಶೃತಿಯ ಸಹೋದರಿಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಅಸಲಿ ಸತ್ಯ ಹೊರಬಿದ್ದಿದೆ.
ಪ್ರಸ್ತುತ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿಗಳಾದ ಶೃತಿ, ಉಬೇದುಲ್ಲಾ ಹಾಗೂ ಸುರೇಶ್ರನ್ನು ಬಂಧಿಸಲಾಗಿದೆ. ನದಿಯಲ್ಲಿ ಬಿಸಾಡಿರುವ ಮೃತದೇಹಕ್ಕಾಗಿ ಪೊಲೀಸರು ತುಂಗಭದ್ರಾ ನದಿಯಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆ.





Leave a comment