ನವದೆಹಲಿ: ಕನ್ನಡದ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಮಕ್ಕಳಿಗಾಗಿ ಮಾಡಿದ್ದಲ್ಲ, ಇದು ಸಂಪೂರ್ಣವಾಗಿ ಹಿರಿಯರಿಗಾಗಿ (Adults Only) ನಿರ್ಮಿಸಲಾದ ಸಿನಿಮಾ ಎಂದು ನಟ ಯಶ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ‘ಆಪ್ ಕೀ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿನಿಮಾದಲ್ಲಿನ ತೀವ್ರ ಆಕ್ಷನ್, ಹಿಂಸಾಚಾರ ಮತ್ತು ಪ್ರಬುದ್ಧ ಕಥಾವಸ್ತುವಿನ ಕಾರಣದಿಂದಾಗಿ ಸಣ್ಣ ಮಕ್ಕಳು ಈ ಚಿತ್ರದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ.
“ಮಕ್ಕಳು ಈ ಸಿನಿಮಾವನ್ನು ನೋಡಬಾರದು. ಅವರು ಮನೆಯಲ್ಲೇ ಇರುವುದು ಒಳ್ಳೆಯದು. ಈ ಚಿತ್ರವನ್ನು ಮಕ್ಕಳಿಗಾಗಿ ಮಾಡಿಲ್ಲ ಎಂಬುದು ಸ್ಪಷ್ಟ. ಹಿರಿಯರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಅರಿವಿರುತ್ತದೆ. ಅವರು ಏನನ್ನು ನೋಡಬೇಕು, ಜೀವನದಲ್ಲಿ ಏನನ್ನು ಕಲಿಯಬಾರದು ಎಂಬುದನ್ನು ತಾವೇ ನಿರ್ಧರಿಸಬಲ್ಲರು” ಎಂದು ಯಶ್ ತಿಳಿಸಿದ್ದಾರೆ.
ಚಿತ್ರದ ಟ್ಯಾಗ್‌ಲೈನ್ ‘ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (ಹಿರಿಯರಿಗೊಂದು ಕಾಲ್ಪನಿಕ ಕಥೆ) ಎಂಬುದೇ ಇದು ಪ್ರಬುದ್ಧ ಪ್ರೇಕ್ಷಕರಿಗಾಗಿ ರೂಪುಗೊಂಡ ಸಿನಿಮಾ ಎಂಬುದನ್ನು ಸೂಚಿಸುತ್ತದೆ ಎಂದು ಅವರು ವಿವರಿಸಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಹಾಗೂ రుಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಟಾಕ್ಸಿಕ್’ ಸಿನಿಮಾವು ಆಗಸ್ಟ್ 26 ರಂದು ಜಗತ್ತಿನಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.





Leave a comment