Home ನವದೆಹಲಿ EXCLUSIVE: ಭದ್ರಾ ಡ್ಯಾಂ ನೀರು ಹರಿಸುವ ತೀರ್ಮಾನ ಸಿಎಂ ಡಿಕೆಶಿ ಹೆಗಲಿಗೆ: ಐಸಿಸಿ ಸಭೆಯಲ್ಲಿ ಹೈಡ್ರಾಮಾ, ಅಂತಿಮ ನಿರ್ಧಾರ ಪೆಂಡಿಂಗ್!
ನವದೆಹಲಿಬೆಂಗಳೂರು

EXCLUSIVE: ಭದ್ರಾ ಡ್ಯಾಂ ನೀರು ಹರಿಸುವ ತೀರ್ಮಾನ ಸಿಎಂ ಡಿಕೆಶಿ ಹೆಗಲಿಗೆ: ಐಸಿಸಿ ಸಭೆಯಲ್ಲಿ ಹೈಡ್ರಾಮಾ, ಅಂತಿಮ ನಿರ್ಧಾರ ಪೆಂಡಿಂಗ್!

Share
ಭದ್ರಾ ಡ್ಯಾಂ
Share

ಬೆಂಗಳೂರು / ದಾವಣಗೆರೆ: ಬೆಂಗಳೂರಿನ ವಿಕಾಸಸೌಧದಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ (ICC) ಅಧ್ಯಕ್ಷರೂ ಹಾಗೂ ಸಚಿವರೂ ಆದ  ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ನೀರು ಹರಿಸುವ ಕುರಿತ ಅತ್ಯುನ್ನತ ಸಲಹಾ ಸಮಿತಿ ಸಭೆಯು ಯಾವುದೇ ಅಂತಿಮ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ. ಭದ್ರಾ ಡ್ಯಾಂ ನೀರು ಹರಿಸುವ ಸಂಬಂಧ ಸಿಎಂ ಡಿ. ಕೆ. ಶಿವಕುಮಾರ್ ಅವರ ಹೆಗಲಿಗೆ ವಹಿಸಲಾಗಿದೆ.

ಜಲಾಶಯದಲ್ಲಿನ ನೀರಿನ ಸಂಗ್ರಹಣೆ ಹಾಗೂ ಕಾಲುವೆಗಳಿಗೆ ನೀರು ಹರಿಸುವ ದಿನಗಳ ಕುರಿತು ಜನಪ್ರತಿನಿಧಿಗಳು ಮತ್ತು ರೈತ ಮುಖಂಡರ ನಡುವೆ ತೀವ್ರ ಅಭಿಪ್ರಾಯ ಭೇದಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಅಂತಿಮ ನಿರ್ಧಾರದ ಜವಾಬ್ದಾರಿಯನ್ನುಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ಅಂಗಳಕ್ಕೆ ವರ್ಗಾಯಿಸಲಾಗಿದೆ.

ಸಭೆಯಲ್ಲಿ ಗೊಂದಲ ಮತ್ತು ಬಿಸಿ ಬಿಸಿ ಚರ್ಚೆಗೆ ಕಾರಣವೇನು?

ಭತ್ತ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಪಟ್ಟು:

ದಾವಣಗೆರೆ, ಹರಿಹರ ಹಾಗೂ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ (ಟೇಲ್ ಎಂಡ್) ರೈತರು ಭತ್ತ ಮತ್ತು ಮುಂಗಾರು ಬೆಳೆಗಳಿಗೆ ಕಾಲುವೆ ಮೂಲಕ ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ನೀರು ಬಿಡಬೇಕು ಎಂದು ಒತ್ತಾಯಿಸಿದರು.

ಬಿಸಿ ಬಿಸಿ ಚರ್ಚೆ & ರೈತ ಮುಖಂಡರ ಪಟ್ಟು: ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರಾದ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಜನಪ್ರತಿನಿಧಿಗಳು ಹಾಗೂ ರೈತ ಸಂಘಟನೆಗಳ ಮುಖಂಡರ ನಡುವೆ ತೀವ್ರ ವಾಗ್ವಾದ ನಡೆಯಿತು. ಕಾಲುವೆಯ ಕೊನೆ ಭಾಗದ (ಟೇಲ್ ಎಂಡ್) ರೈತರಿಗೆ ತೊಂದರೆಯಾಗದಂತೆ ತಕ್ಷಣ ನೀರು ಹರಿಸಬೇಕು ಹಾಗೂ ದಿನಗಳ ಸಂಖ್ಯೆಯನ್ನು ನಿಖರಗೊಳಿಸಬೇಕು ಎಂದು ಮುಖಂಡರು ಪಟ್ಟು ಹಿಡಿದರು.

ನೀರಿನ ಸ್ಥಿತಿಗತಿ ಹಾಗೂ ತಜ್ಞರ ವರದಿ: ಪ್ರಸ್ತುತ ಜಲಾಶಯದಲ್ಲಿರುವ ನೀರಿನ ಸಂಗ್ರಹಣೆ, ಮುಂಗಾರು ಮಳೆಯ ಒಳಹರಿವಿನ ನಿರೀಕ್ಷೆ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನು ನೀರಾವರಿ ತಜ್ಞರು ಸಭೆಯ ಗಮನಕ್ಕೆ ತಂದರು. ಆದರೆ ನೀರು ಬಿಡುಗಡೆಯ ಅವಧಿ ಮತ್ತು ವೇಳಾಪಟ್ಟಿಯ ಕುರಿತು ಒಮ್ಮತ ಮೂಡಲಿಲ್ಲ.

ಸಿಎಂ/ಡಿಕೆಶಿ ನಿರ್ಧಾರಕ್ಕೆ ಸಮ್ಮತಿ: ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು, ರೈತರು ಮತ್ತು ಇಲಾಖೆಯ ತಾಂತ್ರಿಕ ಅಭಿಪ್ರಾಯಗಳನ್ನು ಕ್ರೋಡೀಕರಿಸಿ,  ಡಿ.ಕೆ. ಶಿವಕುಮಾರ್ ಜೊತೆ ಚರ್ಚಿಸಿ ಅಂತಿಮ ಆದೇಶ ಹೊರಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಆದರೆ, ತೋಟಗಾರಿಕೆ ಬೆಳೆಗಾರರು ಮತ್ತು ನೀರಾವರಿ ತಜ್ಞರು ಮುಂಗಾರು ಮಳೆಯ ಅನಿಶ್ಚಿತತೆಯನ್ನು ಗಣನೆಗೆ ತೆಗೆದುಕೊಂಡು, ಮುಂದಿನ ಬೇಸಿಗೆ ಹಂಗಾಮಿಗೂ ನೀರು ಕಾಯ್ದಿರಿಸುವಂತೆ ಮಿತವಾಗಿ ನೀರು ಹರಿಸಲು ಸಲಹೆ ನೀಡಿದರು. ಈ ಎರಡು ವಿಭಿನ್ನ ಬೇಡಿಕೆಗಳಿಂದಾಗಿ ಸಭೆಯಲ್ಲಿ ವಾಗ್ದಾಳಿ ನಡೆಯಿತು.

ನೀರಿನ ತಾಂತ್ರಿಕ ಲೆಕ್ಕಾಚಾರ ಮತ್ತು ಒಳಹರಿವಿನ ಅನಿಶ್ಚಿತತೆ:

ಜಲಾಶಯದ ಪ್ರಸ್ತುತ ನೀರಿನ ಮಟ್ಟ ಮತ್ತು ಲಭ್ಯತೆಯನ್ನು ಪರಿಶೀಲಿಸಿದ ಎಂಜಿನಿಯರ್‌ಗಳು ನೀಡಿದ ವರದಿಯ ಮೇಲೆ ಸಭೆಯಲ್ಲಿದ್ದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೊನೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪಿಸಲು ಅಗತ್ಯವಿರುವ ದಿನಗಳ ಸಂಖ್ಯೆಯ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಒಮ್ಮತ ಮೂಡಲಿಲ್ಲ.

ಕ್ಷೇತ್ರವಾರು ಜನಪ್ರತಿನಿಧಿಗಳ ಒತ್ತಡ:

ತಮ್ಮ ತಮ್ಮ ಕ್ಷೇತ್ರದ ರೈತರ ಹಿತರಕ್ಷಣೆಗಾಗಿ ಶಾಸಕರು ಮತ್ತು ಸಚಿವರು ಬೇರೆ ಬೇರೆ ರೀತಿಯ ಬೇಡಿಕೆಗಳನ್ನು ಮುಂದಿಟ್ಟರು. ಇದರಿಂದಾಗಿ ಸ್ಥಳೀಯ ಮಟ್ಟದ ಸಲಹಾ ಸಮಿತಿಯಲ್ಲಿ ಯಾವುದೇ ರಾಜಿಯ ತೀರ್ಮಾನಕ್ಕೆ ಬರಲು ಸಚಿವ ಮಧು ಬಂಗಾರಪ್ಪ ಅವರಿಗೆ ಸಾಧ್ಯವಾಗಲಿಲ್ಲ.

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:

ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಮಾಯಕೊಂಡ ಶಾಸಕರೂ ಆದ ಸಚಿವ ಬಸವಂತಪ್ಪ, ಶಾಸಕರಾದ ಶಾಂತನಗೌಡ, ಹರಿಹರ ಶಾಸಕ ಬಿ.ಪಿ. ಹರೀಶ್, ಸಮರ್ಥ್ ಶಾಮನೂರು, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ,  ಶಾರದಾ ಪೂರ್ಯಾ ನಾಯ್ಕ್, ಬಲ್ಕೀಶ್ ಬಾನು, ಡಾ.  ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಸ್. ರಾಮಪ್ಪ, ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಅನುಷ್ಠಾನ ತಾಲೂಕು ಸಮಿತಿ ಅಧ್ಯಕ್ಷ ಎನ್.ಎಚ್. ಶ್ರೀನಿವಾಸ್ ನಂದಿಗಾವಿ ಸೇರಿದಂತೆ ನೀರಾವರಿ ತಜ್ಞರು ಮತ್ತು ವಿವಿಧ ರೈತ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ಮುಂದಿನ ಹೆಜ್ಜೆ:

ಜಲಸಂಪನ್ಮೂಲ ಇಲಾಖೆಯ ಉಸ್ತುವಾರಿ ವಹಿಸಿರುವ ಡಿ.ಕೆ. ಶಿವಕುಮಾರ್ ಅವರು ತಾಂತ್ರಿಕ ವರದಿಯನ್ನು ಪರಿಶೀಲಿಸಿ, ಎಲ್ಲಾ ಭಾಗದ ರೈತರಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಶೀಘ್ರದಲ್ಲೇ ಭದ್ರಾ ಕಾಲುವೆಗೆ ನೀರು ಬಿಡುವ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದಾರೆ.

Share

Leave a comment

Leave a Reply

Your email address will not be published. Required fields are marked *