ಬೆಂಗಳೂರು: ಕರ್ತವ್ಯದಲ್ಲಿದ್ದ ಮಹಿಳಾ ಸಬ್-ಇನ್ಸ್ಪೆಕ್ಟರ್ (PSI) ಮೇಲೆ ಹಲ್ಲೆ ನಡೆಸಿ, ಅತ್ಯಂತ ಹಗುರವಾಗಿ ಬಾಡಿ ಶೇಮಿಂಗ್ ಮಾಡಿ ನಿಂದಿಸಿದ ಭಟ್ಟರಹಳ್ಳಿ ಜಂಕ್ಷನ್ನ ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಆಗಸ್ಟ್ 12 ರಂದು ಭಟ್ಟರಹಳ್ಳಿ ಜಂಕ್ಷನ್ ಬಳಿ ಸಂಚಾರ ನಿಯಂತ್ರಿಸುತ್ತಿದ್ದ ಮಹಿಳಾ ಪಿಎಸ್ಐ, ಸಹೋದ್ಯೋಗಿ ಜೊತೆ ಗಲಾಟೆ ಮಾಡುತ್ತಿದ್ದ ವಕೀಲ ಹೇಮಂತ್ ರೆಡ್ಡಿ ಎಂಬಾತನನ್ನು ಸಮಾಧಾನಪಡಿಸಲು ತೆರಳಿದ್ದರು. ಈ ವೇಳೆ ವಕೀಲ ಹಾಗೂ ಆತನ ಕಡೆಯವರು ಸಿಬ್ಬಂದಿಯೊಂದಿಗೆ ತೀವ್ರ ವಾಕ್ಸಮರಕ್ಕಿಳಿದಿದ್ದಾರೆ.
ಕಿತ್ತಾಟದ ಸಮಯದಲ್ಲಿ, “ನೀನು ಎಮ್ಮೆ ತರ ಇದ್ದೀಯ, ಏನು ತಿಂತೀಯಾ?” ಎಂದು ಮಹಿಳಾ ಅಧಿಕಾರಿಯನ್ನು ಉದ್ದೇಶಿಸಿ ಅತ್ಯಂತ ಶೋಚನೀಯವಾಗಿ ನಿಂದಿಸಲಾಗಿದೆ. ಅಲ್ಲದೆ, ಸ್ಥಳಕ್ಕೆ ಬಂದ ವಕೀಲನ ಸ್ನೇಹಿತ ರಾಹುಲ್ ಎಂಬಾತ ಮಹಿಳಾ ಅಧಿಕಾರಿಯ ಕೈ ಎಳೆದು ಹಲ್ಲೆ ನಡೆಸಿದ್ದಾನೆ. ನಂತರ ಸ್ಥಳಕ್ಕೆ ಬಂದ ಹೇಮಂತ್ ರೆಡ್ಡಿಯ ಸಹೋದರ ಹರ್ಷಿತ್ ರೆಡ್ಡಿ ಹಾಗೂ ತಂದೆ ರಾಧಾಕೃಷ್ಣ ರೆಡ್ಡಿ ಕೂಡ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ.
ಈ ಸಂಪೂರ್ಣ ಘಟನೆಯನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡ ಆರೋಪಿಗಳು, ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಡುವುದಾಗಿ ಬೆದರಿಕೆ ಒಡ್ಡಿದ್ದರು. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಕೆ.ಆರ್. ಪುರಂ ಪೊಲೀಸರು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.





Leave a comment