ನವದೆಹಲಿ: ದಿವಂಗತ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಮದುವೆಯಾದ ನಂತರ ತಮ್ಮ ತಾಯಿ, ಹಿರಿಯ ನಟಿ ಶರ್ಮಿಳಾ ಠಾಗೋರ್ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ವಿಷಯವನ್ನು ಅವರ ಮಗಳು ಸಬಾ ಪಟೌಡಿ ಬಹಿರಂಗಪಡಿಸಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಮಾತನಾಡಿದ ಸಬಾ ಪಟೌಡಿ, ತಮ್ಮ ತಾಯಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಮಕ್ಕಳಿಗೆ ಧಾರ್ಮಿಕ ತಿಳುವಳಿಕೆಯನ್ನು ನೀಡಿದರು ಎಂದು ತಿಳಿಸಿದ್ದಾರೆ. “ನಾವು ಗೊಂದಲಕ್ಕೊಳಗಾಗಬಾರದು ಮತ್ತು ನಮಗೆ ಒಂದು ಆಧ್ಯಾತ್ಮಿಕ ನೆಲೆ ಸಿಗಲಿ ಎಂಬ ಕಾರಣಕ್ಕೆ ಅಮ್ಮ ಇಸ್ಲಾಂ ಧರ್ಮದ ಕುರಿತು ನಮಗೆ ತಿಳಿಸಿಕೊಟ್ಟರು. ರಂಜಾನ್ ಮತ್ತು ಇಸ್ಲಾಂ ಧರ್ಮದ ಆಚರಣೆಗಳನ್ನು ಕಲಿಸಿಕೊಟ್ಟರು” ಎಂದು ಸಬಾ ಹೇಳಿದ್ದಾರೆ.
ಧರ್ಮ ಹೇರಿಕೆಯಿಲ್ಲ, ಮನೆಯಲ್ಲಿ ಎಲ್ಲ ಹಬ್ಬಗಳ ಆಚರಣೆ:
ಧರ್ಮದ ಮೂಲ ತಿಳಿಸಿಕೊಟ್ಟರೂ ಸಹ ತಮ್ಮ ಪೋಷಕರು ಅದನ್ನು ಎಂದಿಗೂ ಮಕ್ಕಳ ಮೇಲೆ ಬಲವಂತವಾಗಿ ಹೇರಲಿಲ್ಲ ಎಂದು ಸಬಾ ಸ್ಪಷ್ಟಪಡಿಸಿದ್ದಾರೆ. “ನಮ್ಮ ಮನೆಯಲ್ಲಿ ದೀಪಾವಳಿ, ಹೋಳಿ, ಕ್ರಿಸ್ಮಸ್ ಹಾಗೂ ಈದ್ ಸೇರಿದಂತೆ ಎಲ್ಲಾ ಧರ್ಮಗಳ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ನಂಬಿಕೆ ಎಂಬುದು ತೀರಾ ವೈಯಕ್ತಿಕ ವಿಷಯ” ಎಂದು ಸಬಾ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನಟ ಸೈಫ್ ಅಲಿ ಖಾನ್ ಕೂಡ ತಮ್ಮ ಮನೆಯಲ್ಲಿ ಧಾರ್ಮಿಕ ಸಹಿಷ್ಣುತೆ ಮತ್ತು ಮುಕ್ತ ವಾತಾವರಣ ಇರುವ ಕುರಿತು ಮಾತನಾಡಿದ್ದರು. “ದೇವನೊಬ್ಬ ನಾಮ ಹಲವು” ಎಂಬ ತತ್ವವನ್ನು ತಾಯಿ ಶರ್ಮಿಳಾ ಠಾಗೋರ್ ತಮಗೆ ಕಲಿಸಿಕೊಟ್ಟಿದ್ದು, ಅದನ್ನೇ ತಾವು ತಮ್ಮ ಮಕ್ಕಳಿಗೂ ತಿಳಿಸುತ್ತಿರುವುದಾಗಿ ಸೈಫ್ ಹೇಳಿದ್ದರು.





Leave a comment