SUDDIKSHANA KANNADA NEWS/ DAVANAGERE/ DATE:19-01-2025
ಬೆಂಗಳೂರು: ಮೈಕ್ರೋ ಫೈನಾನ್ಸ್ ಹಾವಳಿ ಹಾಗೂ ವಸೂಲಾತಿ ದೌರ್ಜನ್ಯದಿಂದ ಸಾಲಗಾರ ಬಡವರು ತತ್ತರಿಸಿದ್ದು ಅದರಲ್ಲೂ ಗ್ರಾಮೀಣ ಪ್ರದೇಶದ ಬಡ ಜನರು, ಕೃಷಿಕರು, ಸಣ್ಣ ಹಿಡುವಳಿದಾರ ರೈತರು, ಶ್ರಮಿಕ ವರ್ಗದವರು, ಬೀದಿ ಬದಿ ವ್ಯಾಪಾರಿಗಳನ್ನು ಗುರಿಯನ್ನಾಗಿಸಿಕೊಂಡು ಸಾಲ ವಿತರಿಸಲಾಗುತ್ತಿದ್ದು ಇವರೆಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಮೀಟರ್ ಬಡ್ಡಿ ದಂಧೆಕೋರರನ್ನು ಹತ್ತಿಕ್ಕುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಜಾಲ ಸಾಲಗಾರರ ಪ್ರಾಣ ಹಿಂಡಿ ವಸೂಲಾತಿಗೆ ನಿಂತಿರುವುದು ಬಯಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಬಿ. ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರ್ಯಾದೆಗೆ ಅಂಜಿ ಗ್ರಾಮೀಣ ಪ್ರದೇಶದ ಬಡವರು ಮನೆ ತೊರೆದು ಹೋಗುತ್ತಿದ್ದಾರೆ. ಇವರ ರಕ್ಷಣೆಗೆ ಸರ್ಕಾರ ಜರೂರು ಕ್ರಮ ಕೈಗೊಳ್ಳಬೇಕಿದೆ. ಕಾನೂನು ಹಾಗೂ ಗೃಹ ಇಲಾಖೆ ಈ ಸಂಬಂಧವಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ವಸೂಲಾತಿಗಿಳಿದು ಗುಂಡಾಗಿರಿ ಪ್ರದರ್ಶಿಸುತ್ತಿರುವ ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಎಷ್ಟು ಬಿಟ್ಟಿ ಭಾಗ್ಯಗಳನ್ನು ನೀಡಿದರೇನು?ಬಡವರನ್ನು ಮೈಕ್ರೋ ಫೈನಾನ್ಸ್ ನಂತಹ ಜಾಲದ ವ್ಯೂಹಕ್ಕೆ ಬಡವರು ಸಿಲುಕಿಕೊಂಡು ನರಳುತ್ತಿರುವ ಪರಿಸ್ಥಿತಿ ಉದ್ಭವಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. ಸಾಮಾಜಿಕ ಅಭದ್ರತೆಯಿಂದ ಹಾಗೂ ಶೇ 25% ಕ್ಕೂ ಹೆಚ್ಚು ಬಡ್ಡಿ ವಿಧಿಸಿ ಸಕಾಲದಲ್ಲಿ ಕಂತು ಪಾವತಿಸಲು ಸಾಧ್ಯವಾಗದವರ ಮೇಲೆ ಇನ್ನಷ್ಟು ಶುಲ್ಕಗಳನ್ನು ವಿಧಿಸಿ ಇದ್ದಬದ್ದ ಆಸ್ತಿಯನ್ನೆಲ್ಲ ಮಾರಿಕೊಳ್ಳುವ ಪರಿಸ್ಥಿತಿಯು ಈ ಮೈಕ್ರೋಫೈನಾನ್ಸ್ ಸಾಲ ನೀಡುವ ಜಾಲದಿಂದ ಉದ್ಭವಿಸಿದೆ ಎಂದು ಕಿಡಿಕಾರಿದ್ದಾರೆ.
ಇಡೀ ರಾಜ್ಯದ್ಯಂತ ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸಾವಿರಾರು ಶಾಖೆಗಳು ತನ್ನ ಜಾಲಗಳನ್ನು ವಿಸ್ತರಿಸಿ ಅಮಾಯಕರು, ಕನಿಷ್ಠ ಆದಾಯದಿಂದ ಬದುಕುವವರನ್ನು ಆಯ್ದುಕೊಂಡು ಸಾಲ ನೀಡುವ ಮೂಲಕ ಅವರು ಸಾಲ ತೀರಿಸುವ ವ್ಯೂಹದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ದೂರಿದ್ದಾರೆ.