SUDDIKSHANA KANNADA NEWS/ DAVANAGERE/ DATE:16-01-2025
ಬೀದರ್: ಬೀದರ್ ನ ಎಟಿಎಂ ಸಿಬ್ಬಂದಿಯ ಮೇಲಿನ ಮಾರಣಾಂತಿಕ ಗುಂಡಿನ ದಾಳಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಹಾಡು ಹಗಲಲ್ಲೇ ಗುಂಡಿನ ದಾಳಿ ನಡೆಸುವಷ್ಟು ಕಿರಾತಕರು ಧೈರ್ಯ ಪ್ರದರ್ಶಿಸಿರುವುದನ್ನು ಕೇವಲ ದರೋಡೆ ಎಂದು ಪರಿಗಣಿಸದೆ ಇದರ ಹಿಂದೆ ಭಯೋತ್ಪಾದಕ ಶಕ್ತಿಗಳು ಇಲ್ಲದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಬಿಜೆಪಿ ರಾಜ್ಯ ಘಟಕ ಹೇಳಿದೆ.
ಈ ನಿಟ್ಟಿನಲ್ಲಿ ಅತ್ಯಂತ ಗಂಭೀರವಾಗಿ ಈ ಪ್ರಕರಣವನ್ನು ಸರ್ಕಾರ ಪರಿಗಣಿಸಬೇಕಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ತಳಪಾಯ ಕಚ್ಚಿದೆ ರಾಜ್ಯವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಳ್ಳಲು ದುಷ್ಟ ಶಕ್ತಿಗಳಿಗೆ ಈ ಸರ್ಕಾರ ಉತ್ತೇಜನ ನೀಡುತ್ತಿರುವ ಕಾರಣದಿಂದಾಗಿಯೇ ಮೇಲಿಂದ ಮೇಲೆ ಕ್ರಿಮಿನಲ್ ಅಪರಾಧಗಳು, ಮಾಫಿಯಾಗಳು, ಅಟ್ಟಹಾಸ ಮೆರೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ದುರ್ಘಟನೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಈ ಕೂಡಲೇ ದರೋಡೆಕೋರರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಆಗ್ರಹಿಸುವೆ ಎಂದು ತಿಳಿಸಿದ್ದಾರೆ.