SUDDIKSHANA KANNADA NEWS/ DAVANAGERE/ DATE:12-01-2025
ದಾವಣಗೆರೆ: ಅಕ್ರಮ ಮದ್ಯ ಮಾರಾಟ ಸ್ಥಗಿತಕ್ಕೆ ಒತ್ತಾಯಿಸಿ ಚನ್ನಗಿರಿ ನಗರದ ಅಬಕಾರಿ ಕಚೇರಿ ಮುಂಭಾಗ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಪಾಲ್ಗೊಂಡರು.
ಕಳೆದ ಹಲವಾರು ದಿನಗಳಿಂದ ಚನ್ನಗಿರಿ ತಾಲೂಕಿನಲ್ಲಿ ಮಿತಿಮೀರಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೃಷ್ಣಪ್ಪರ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದೆ. ಈ ಧರಣಿಯಲ್ಲಿ ಪಾಲ್ಗೊಂಡು ವಿನಯ್ ಕುಮಾರ್ ಹೋರಾಟ ನ್ಯಾಯಸಮ್ಮತವಾಗಿದೆ. ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಘೋಷಿಸಿದರು. ಧರಣಿಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.
ಈ ವೇಳೆ ಮಾತನಾಡಿದ ಜಿ. ಬಿ. ವಿನಯ್ ಕುಮಾರ್ ಅವರು, ಕಳೆದ 13 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಇನ್ನೂ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕದಿರುವುದು ಬೇಸರದ ಸಂಗತಿ. ಮದ್ಯ ಮಾರಾಟ ಮಾಡುತ್ತಿರುವುದು ಗೊತ್ತಿದ್ದರೂ ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡಿದರೂ ಸ್ಪಂದಿಸದಿರುವುದು ನೋವಿನ ವಿಚಾರ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿನ ಜನರು ಬಡವರು. ಆದ್ರೆ, ಮದ್ಯ ಮಾರಾಟದಿಂದಾಗಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದುಡಿದ ಹಣವನ್ನೆಲ್ಲಾ ಪುರುಷರು ಮದ್ಯ ಸೇವನೆಗೆ ಬಳಸಿದರೆ ಕುಟುಂಬದ ನಿರ್ವಹಣೆ ಹೇಗೆ ಎಂದು ಪ್ರಶ್ನಿಸಿದರು.
ಆದಷ್ಟು ಬೇಗ ಚನ್ನಗಿರಿ ತಾಲೂಕಿನಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮದ್ಯಕ್ಕೆ ಬ್ರೇಕ್ ಹಾಕಬೇಕು. ಧರಣಿ ಸತ್ಯಾಗ್ರಹ ನಡೆಸುತ್ತಿರುವವರ ಹೋರಾಟ ನ್ಯಾಯಸಮ್ಮತವಾಗಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳದಿದ್ದರೆ ಸ್ವಾಭಿಮಾನಿ ಬಳಗವೂ ಹೋರಾಟ ನಡೆಸಬೇಕಾಗುತ್ತದೆ ಎಂದು ವಿನಯ್ ಕುಮಾರ್ ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಚನ್ನಗಿರಿ ಪುರಸಭಾ ಸದಸ್ಯ ಗಾದ್ರಿ ರಾಜು, ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾಧ್ಯಕ್ಷ ಎ. ಕೆ. ಮಂಜಪ್ಪ ನೀತಿಗೆರೆ, ತಾಲೂಕು ಮಾದಿಗ ಸಮಾಜದ ಗೌರವಾಧ್ಯಕ್ಷ ಬಿ. ಮಂಜುನಾಥ್ ಮಾಚನಾಯಕನಹಳ್ಳಿ, ಮಾದಿಗ ಸಮಾಜದ ಕಾರ್ಯದರ್ಶಿ ದೀಪಕ್ ಕುಮಾರ್ ಹೆತ್. ಸಿ., ಡಿಎಸ್ಎಸ್ ಸಂಘಟನಾ ಸಂಚಾಲಕರಾದ ದೇವರಾಜ್ ಅರಳಿಕಟ್ಟೆ, ಬಸವಪುರ ರಂಗನಾಥ್, ಚಿತ್ರಲಿಂಗಪ್ಪ, ಕುಬೇಂದ್ರ ಸ್ವಾಮಿ., ನಗರ ಘಟಕದ ಸಂಚಾಲಕ ಗುರುರಾಜಪುರ ಹರೀಶ್, ಉಮಾಪತಿ, ಕಾಯಕ ಜೀವಿ ತಾಲೂಕು ಅಧ್ಯಕ್ಷ ಅಫ್ತಾಬ್, ಉಮರ್ ಮುಕ್ತಿಯಾರ್ ಮತ್ತಿತರರು ಪಾಲ್ಗೊಂಡಿದ್ದರು.