Home ಕ್ರೈಂ ನ್ಯೂಸ್ ಯಾರೀ ತರುಣ್ ತೇಜ್‌ಪಾಲ್? ಏನಿದು ತೆಹಲ್ಕಾ?: ರೆಸಾರ್ಟ್ ನಲ್ಲಿ ಆಗಿದ್ದೇನು? 13 ವರ್ಷಗಳ ಹಳೆಯ ಕೇಸ್ ನ 5 ಪ್ರಮುಖ ಅಂಶಗಳು ಇಲ್ಲಿವೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಯಾರೀ ತರುಣ್ ತೇಜ್‌ಪಾಲ್? ಏನಿದು ತೆಹಲ್ಕಾ?: ರೆಸಾರ್ಟ್ ನಲ್ಲಿ ಆಗಿದ್ದೇನು? 13 ವರ್ಷಗಳ ಹಳೆಯ ಕೇಸ್ ನ 5 ಪ್ರಮುಖ ಅಂಶಗಳು ಇಲ್ಲಿವೆ!

Share
ತರುಣ್ ತೇಜ್‌ಪಾಲ್
Share

ಪಣಜಿ: ಸುಮಾರು 13 ವರ್ಷಗಳ ಹಳೆಯ ಹಾಗೂ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ‘ತೆಹಲ್ಕಾ’ ಸುದ್ದಿ ನಿಯತಕಾಲಿಕೆಯ ಸಂಸ್ಥಾಪಕ ಎಡಿಟರ್ ತರುಣ್ ತೇಜ್‌ಪಾಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಮಹತ್ವದ ತೀರ್ಪು ನೀಡಿದೆ. 2021 ರಲ್ಲಿ ವಿಚಾರಣಾ ನ್ಯಾಯಾಲಯ (ಟ್ರಯಲ್ ಕೋರ್ಟ್) ನೀಡಿದ್ದ ತೇಜ್‌ಪಾಲ್ ಖುಲಾಸೆ ಆದೇಶವನ್ನು ರದ್ದುಗೊಳಿಸಿರುವ ಹೈಕೋರ್ಟ್, ಅವರನ್ನು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದಲ್ಲಿ ಅಪರಾಧಿ ಎಂದು ಘೋಷಿಸಿದೆ.

ಯಾರೀ ತರುಣ್ ತೇಜ್‌ಪಾಲ್? ಏನಿದು ತಹಲ್ಕಾ?:

2000 ರಲ್ಲಿ ಆರಂಭವಾದ ‘ತಹಲ್ಕಾ’ ತನಿಖಾ ನಿಯತಕಾಲಿಕೆಯ ಮೂಲಕ ಖ್ಯಾತಿ ಪಡೆದಿದ್ದ ತರುಣ್ ತೇಜ್‌ಪಾಲ್, 2001 ರ ‘ಆಪರೇಷನ್ ವೆಸ್ಟ್ ಎಂಡ್’ ರಕ್ಷಣಾ ಹಗರಣ ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆಗಳ ಮೂಲಕ ದೇಶದ ಪ್ರಭಾವಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದರು. ಆದರೆ, 2013 ರಲ್ಲಿ ಅವರ ವಿರುದ್ಧ ಸಹೋದ್ಯೋಗಿಯಿಂದ ಲೈಂಗಿಕ ಶೋಷಣೆ ಆರೋಪ ಕೇಳಿಬಂತು.

2013ರ ಗೋವಾ ರೆಸಾರ್ಟ್ ಘಟನೆ:

ನವೆಂಬರ್ 2013 ರಲ್ಲಿ ಗೋವಾದ ಬ್ಯಾಂಬೋಲಿಮ್‌ನಲ್ಲಿರುವ ‘ಗ್ರ್ಯಾಂಡ್ ಹಯಾತ್’ ಹೋಟೆಲ್‌ನಲ್ಲಿ ನಡೆದ ತಹಲ್ಕಾ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ತೇಜ್‌ಪಾಲ್ ಲಿಫ್ಟ್‌ನೊಳಗೆ ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂತ್ರಸ್ತೆ ದೂರು ನೀಡಿದ ನಂತರ, ಗೋವಾ ಪೊಲೀಸರು ಪ್ರಕರಣ ದಾಖಲಿಸಿ 2,846 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿ, ನವೆಂಬರ್ 30, 2013 ರಂದು ತೇಜ್‌ಪಾಲ್ ಅವರನ್ನು ಬಂಧಿಸಿದ್ದರು.

ಆರೋಪಕ್ಕೆ ತೇಜ್‌ಪಾಲ್ ನೀಡಿದ್ದ ಪ್ರತಿಕ್ರಿಯೆ:

ಆರಂಭದಲ್ಲಿ ತೇಜ್‌ಪಾಲ್ ಇದನ್ನು “ನಿರ್ಧಾರದ ಪ್ರಮಾದ” ಎಂದು ಒಪ್ಪಿಕೊಂಡು, 6 ತಿಂಗಳು ಸಂಸ್ಥೆಯಿಂದ ದೂರವಿರುವುದಾಗಿ ಪತ್ರ ಬರೆದಿದ್ದರು. ಆದರೆ ಕಾನೂನು ಪ್ರಕ್ರಿಯೆ ಮುಂದುವರಿದಂತೆ ತಮ್ಮ ನಿಲುವು ಬದಲಿಸಿ, ಈ ಭೇಟಿ ಪರಸ್ಪರ ಸಮ್ಮತಿಯಿಂದ ನಡೆದಿತ್ತು ಎಂದು ಪ್ರತಿಪಾದಿಸಿ, ಸಿವಿವಿಟಿ ದೃಶ್ಯಾವಳಿಗಳನ್ನು ತನಿಖೆಗೆ ಒಳಪಡಿಸುವಂತೆ ಕೋರಿದ್ದರು.

2021ರ ವಿಚಾರಣಾ ನ್ಯಾಯಾಲಯದ ಖುಲಾಸೆ:

ಮೇ 2021 ರಲ್ಲಿ ಗೋವಾದ ಮಾಪುಸಾ ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್ ಸಾಕ್ಷ್ಯಗಳಲ್ಲಿ ವೈಫಲ್ಯವಿದೆ ಎಂದು ಹೇಳಿ ತೇಜ್‌ಪಾಲ್ ಅವರನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಬಾಂಬೆ ಹೈಕೋರ್ಟ್‌ನಿಂದ ಅಪರಾಧಿ ಎಂದು ತೀರ್ಪು:

ವಿಚಾರಣಾ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿದ ಬಾಂಬೆ ಹೈಕೋರ್ಟ್, ತೇಜ್‌ಪಾಲ್ ಅವರನ್ನು ಐಪಿಸಿ ಸೆಕ್ಷನ್ 376(2)(f), 376(2)(k), 354A ಮತ್ತು 354B ಅಡಿಯಲ್ಲಿ ಅಪರಾಧಿ ಎಂದು ತೀರ್ಪು ನೀಡಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ತೀರ್ಪಿನ ವೇಳೆ ತೇಜ್‌ಪಾಲ್ ಕೋರ್ಟ್‌ನಲ್ಲಿ ಉಪಸ್ಥಿತರಿದ್ದು, “ನನಗೆ 62 ವರ್ಷ ವಯಸ್ಸಾಗಿದೆ, ದಯವಿಟ್ಟು ಕರುಣೆ ತೋರಿ” ಎಂದು ಮನವಿ ಮಾಡಿದರು. ತೇಜ್‌ಪಾಲ್ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles