Home ದಾವಣಗೆರೆ ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಹಾಕಿದ್ದಾರಾ? ನಿಮ್ಮ ಆದಾಯ ಡಬಲ್ ಮಾಡಿದ್ದಾರಾ?: ಡಿ. ಕೆ. ಶಿವಕುಮಾರ್
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಹಾಕಿದ್ದಾರಾ? ನಿಮ್ಮ ಆದಾಯ ಡಬಲ್ ಮಾಡಿದ್ದಾರಾ?: ಡಿ. ಕೆ. ಶಿವಕುಮಾರ್

Share
ಆದಾಯ
Share

ಬೆಂಗಳೂರು: “ನಾವು ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಈ ಯೋಜನೆ ಜಾರಿ ಮಾಡುವ ಶಕ್ತಿ ನೀಡು ತಾಯಿ ಎಂದು ಚಾಮುಂಡೇಶ್ವರಿ ಬಳಿ ಪ್ರಾರ್ಥನೆ ಮಾಡಿದೆ. ಆ ತಾಯಿ ಆಶೀರ್ವಾದ, ನಿಮ್ಮ ಸಹಕಾರದಿಂದ ನಾವು ರಾಜ್ಯದಲ್ಲಿ 135 ಸೀಟು ಗೆದ್ದು ಅಧಿಕಾರಕ್ಕೆ ಬಂದೆವು. ನಾವು ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತು ಉಳಿಸಿಕೊಂಡಿದ್ದೇವೊ ಇಲ್ಲವೋ ನೀವೇ ಹೇಳಿ ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. 

ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಆರ್ಚಕರ ಆಗಮಿಕರ ಮತ್ತು ನೌಕರರ ಸಂಘ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೃಹತ್ ಸಮಾವೇಶ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಅಭಿನಂದನಾ ಸಮಾರಂಭವನ್ನು ಶಿವಕುಮಾರ್ ಅವರು ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯವರು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಹಾಕಿದ್ದಾರಾ? ನಿಮ್ಮ ಆದಾಯ ಡಬಲ್ ಮಾಡಿದ್ದಾರಾ? ನಾವು ಕೊಟ್ಟ ಮಾತು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಬೆಲೆ ಏರಿಕೆ ಮಧ್ಯೆ ಈ ಯೋಜನೆಗಳು ನಿಮಗೆ ಆಸರೆಯಾಗಿವೆ” ಎಂದು ತಿಳಿಸಿದರು.

“ನಾವು ಈಗ ಮಕ್ಕಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದ್ದೇವೆ. ಬೆಂಗಳೂರು ನಗರದಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 50 ಲಕ್ಷ ಜನ ಹೊರಗಿನಿಂದ ಬಂದವರಾಗಿದ್ದಾರೆ. ನಮ್ಮ ಸರ್ಕಾರ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದೆ. ನಾವು ಇದಕ್ಕಾಗಿ 10 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಲು ವಾರ್ಷಿಕ 20 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆ ಮೂಲಕ 1.21 ಕೋಟಿ ಮಹಿಳೆಯರಿಗೆ ಮಾಸಿಕ 2000 ಹಣ ನೀಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ ಅಕ್ಕಿ ನೀಡುತ್ತಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಇಂತಹ ಒಂದು ಸಾಕ್ಷಿಗುಡ್ಡೆ ಉದಾಹರಣೆ ನೀಡುವ ಶಕ್ತಿ ಇದೆಯೇ? ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಕೊಟ್ಟ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ರಾಮಲಿಂಗಾ ರೆಡ್ಡಿ ಅವರಿಗೆ ಮುಜರಾಯಿ ಇಲಾಖೆ ಅವಕಾಶ ಸಿಕ್ಕಿತು. ಅವರು ನಿಮ್ಮ ಹೃದಯ ಗೆದ್ದಿದ್ದು ಹೇಗೆ?” ಎಂದರು.

“ನೀವು ನಿಮ್ಮನ್ನು ನಿಯಂತ್ರಿಸಬೇಕಾದರೆ, ನಿಮ್ಮ ಮಿದುಳನ್ನು ಉಪಯೋಗಿಸು, ನೀವು ಬೇರೆಯವರನ್ನು ನಿಯಂತ್ರಿಸಬೇಕಾದರೆ, ಹೃದಯವನ್ನು ಉಪಯೋಗಿಸು ಎಂದು ಮಹಾತ್ಮಾ ಗಾಂಧಿ ಅವರು ಹೇಳಿದ್ದಾರೆ. ಅದೇ ರೀತಿ ರಾಮಲಿಂಗಾ ರೆಡ್ಡಿ ಅವರು ನಿಮ್ಮ ಹೃದಯನ್ನು ಗೆದ್ದಿದ್ದಾರೆ. ನೀವು ಸುಮ್ಮನೆ ಅವರ ಪರವಾಗಿ ಇದ್ದೀರಾ? ಅವರು ನಿಮಗೆ ಸಹಾಯ ಮಾಡಿರುವುದಕ್ಕೆ ಅಲ್ಲವೇ ನೀವು ಅವರ ಪರವಾಗಿ ನಿಂತಿರುವುದು” ಎಂದರು.

“ಧರ್ಮಗಳು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ನೀವು ನಾವು ಜನಿಸುವಾಗ ಇಂತಹುದೇ ಜಾತಿ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುವುದಿಲ್ಲ. ಅನೇಕರು ಧರ್ಮ ಬೇಡ ಎನ್ನುತ್ತಾರೆ. ಮಗು ಹುಟ್ಟಿದಾಗಿನಿಂತ ನಡೆಯುವ ಪದ್ಧತಿ, ಸತ್ತ ಮೇಲೆ ನಡೆಯುವ ಪದ್ಧತಿಯನ್ನು ನಿರ್ಧಾರ ಮಾಡುವುದು ಇದೇ ಧರ್ಮ. ಧರ್ಮವನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಅರ್ಚಕರಿಗೆ ಜಾತಿ ಇಲ್ಲ, ಧರ್ಮಕ್ಕೆ ಭೇದವಿಲ್ಲ. ಬಡವ ಶ್ರೀಮಂತನೆಂಬ ವ್ಯತ್ಯಾಸವಿಲ್ಲ. ಈ ಸಂದೇಶ ಸಾರುವವರು ಪುರೋಹಿತರು. ನಿಮ್ಮಲ್ಲಿರುವ ತಾಳ್ಮೆ, ಪೂಜೆ, ಸಂಸ್ಕಾರ ನೋಡಿ ನಾನು ಧನ್ಯನಾಗಿದ್ದೇನೆ. ನಿಮ್ಮ ಮಂತ್ರ, ಆರತಿ, ಗಂಟೆ ನಾದ, ತೀರ್ಥ ಪ್ರಸಾದ ಎಲ್ಲವೂ ಒಂದೇ. ನಾನು ಮಠವೊಂದಕ್ಕೆ ಹೋಗಿದ್ದಾಗ ಅಲ್ಲಿ ಬಿದಿರಿತ್ತು, ಆ ಬಿದಿರಿಗೆ ತನ್ನಿಂದ ನಾದ ಹೊರಹೊಮ್ಮುತ್ತದೆ ಎಂದು ತಿಳಿದಿಲ್ಲ. ಆ ಬಿದಿರು ಕೃಷ್ಣನ ಕೊಳಲಾಗುತ್ತದೆ. ಕೃಷ್ಣ ಆ ಕೊಳಲಿನಿಂದ ಗೋವುಗಳು, ಆತ್ಮೀಯರನ್ನು ಸೆಳೆಯುತ್ತಿದ್ದ. ಅಂತಹ ಶಕ್ತಿ ಕೊಳಲಲ್ಲಿ ಇತ್ತು. ತಮಟೆ, ತಬಲದ ನಾದ ಬಂದಿದ್ದು ಚರ್ಮದಿಂದ” ಎಂದು ತಿಳಿಸಿದರು.

“ದ್ವಾರಕನಾಥ್ ಅವರು ನನ್ನ ರಾಜಕೀಯ ಆರಂಭಿಕ ದಿನಗಳಲ್ಲೇ ನೀನು ಅಲ್ಪಾವಧಿಗೆ ಮಂತ್ರಿಯಾಗುತ್ತೀಯಾ ನಂತರ ಪಕ್ಷದ ಟಿಕೆಟ್ ಸಿಗುವುದಿಲ್ಲ ಎಂದು ನನಗೆ ಮುಂಚೆಯೇ ಹೇಳಿದ್ದರು. ಅವರು ಹೇಳಿದಂತೆ ನಾನು ಮಂತ್ರಿಯಾದ ಬಳಿಕ ನನಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ನಿಮ್ಮ ಅಧ್ಯಕ್ಷರು ನಿಮ್ಮ ಪರವಾಗಿ ಸನ್ಮಾನ ಮಾಡಿದ್ದಾರೆ. ಈ ವೇಳೆ ನೀವು ಹಾಕಿದ ಹಾರ ಬಲು ಭಾರ. ಹೆಚ್ಚಿನ ಜವಾಬ್ದಾರಿ ತಂದಿದೆ. ಅವರಿಗೆ ಮುಜರಾಯಿ ಇಲಾಖೆ ನೀಡಿದ್ದೇ ನಾನು. ಸುಧಾಕರ್ ಅವರಿಗೆ ಈ ಖಾತೆ ಸಿಕ್ಕಿತ್ತು. ನಾನು ಅವರೊಂದಿಗೆ ಮಾತನಾಡಿ ರಾಮಲಿಂಗಾ ರೆಡ್ಡಿ ಅವರಿಗೆ ಈ ಖಾತೆಯನ್ನು ಕೊಡಿಸಿದೆ. ಅವರು ಈ ಖಾತೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಕೇವಲ ನಿಮ್ಮ ಮಾತು ಮಾತ್ರವಲ್ಲ, ದೇಶದ ಯಾವುದೇ ದೇವಾಲಯಕ್ಕೆ ಹೋದರೂ ಮುಜರಾಯಿ ಇಲಾಖೆಯಲ್ಲಿ ಮಾಡಲಾಗಿರುವ ಕೆಲಸಗಳು ಬೇರೆ ಯಾವ ಸಂದರ್ಭದಲ್ಲಿ ಮಾಡಿಲ್ಲ ಎಂದು ಅವರೇ ತಿಳಿಸುತ್ತಾರೆ. ಅವರು ಈ ರೀತಿ ಕೆಲಸ ಮಾಡಿ ನಿಮ್ಮ ಹೃದಯ ಗೆದ್ದಿದಾರೆ” ಎಂದು ತಿಳಿಸಿದರು.

“ದೇವರಲ್ಲಿ ತಾರತಮ್ಯವಿದೆ. ದೇವರು ಬಲಿ ಪಡೆಯುವಾಗ ಆನೆ, ಸಿಂಹ, ಹುಲಿಯನ್ನು ಬಲಿ ಪಡೆಯದೇ, ಕುರಿ, ಕೋಳಿ ಹೆಚ್ಚೆಂದರೆ ಕೋಣವನ್ನು ಮಾತ್ರ ಬಲಿ ಪಡೆಯುತ್ತದೆ. ಅದೇ ರೀತಿ ನೀವು ಬಡ ದೇವಾಲಯಗಳ ಅರ್ಚಕರು ಇದ್ದೀರಿ. ದೊಡ್ಡವರೆಲ್ಲರೂ ಮೇಲೆ ಕೂತಿದ್ದಾರೆ. ನೋವು ಇರುವುದು ನಿಮಗೆ ಮಾತ್ರ. ಯಾವ ಧರ್ಮವೂ ಬೇರೆಯವರನ್ನು ದ್ವೇಷ ಮಾಡಿ ಎಂದು ಹೇಳುವುದಿಲ್ಲ. ನಾವು ಎಲ್ಲರನ್ನೂ ಪೂಜಿಸುತ್ತೇವೆ. ಇದು ಡಿ ಕೆ ಶಿವಕುಮಾರ್ ಸರ್ಕಾರ ಅಲ್ಲ. ಇದು ನಿಮ್ಮ ಸರ್ಕಾರ. ನೀವು ನಿಮ್ಮ ಮನೆ ಕುಟುಂಬಗಳನ್ನು ಕಾಪಾಡಿಕೊಂಡಂತೆ ಕಾಪಾಡಿಕೊಳ್ಳಿ. ನಾವು ನೀವೆಲ್ಲರೂ ಒಂದು ಕುಟುಂಬವಾಗಿ ಕೆಲಸ ಮಾಡೋಣ, ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ, ನಾವು ನಿಮ್ಮ ಸೇವೆ ಮಾಡಲು ಬದ್ಧರಾಗಿದ್ದೇವೆ” ಎಂದು ಭರವಸೆ ನೀಡಿದರು.

Share

Leave a comment

Leave a Reply

Your email address will not be published. Required fields are marked *

Related Articles