Home ಕ್ರೈಂ ನ್ಯೂಸ್ ‘ನಮ್ಮ ವಿರೋಧ ಭಕ್ತಿಗಲ್ಲ, ನಂಬಿಕೆಯ ಹೆಸರಲ್ಲಿ ನಡೆಯುವ ದೋಚುವಿಕೆಗೆ’: ಪೋಲಿಸ್ ದೂರು ಬೆನ್ನಲ್ಲೇ ನಟನಾ ವಿವಾದಕ್ಕೆ ಪಪ್ಪು ಯಾದವ್ ಸ್ಪಷ್ಟನೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

‘ನಮ್ಮ ವಿರೋಧ ಭಕ್ತಿಗಲ್ಲ, ನಂಬಿಕೆಯ ಹೆಸರಲ್ಲಿ ನಡೆಯುವ ದೋಚುವಿಕೆಗೆ’: ಪೋಲಿಸ್ ದೂರು ಬೆನ್ನಲ್ಲೇ ನಟನಾ ವಿವಾದಕ್ಕೆ ಪಪ್ಪು ಯಾದವ್ ಸ್ಪಷ್ಟನೆ!

Share
ಪಪ್ಪು ಯಾದವ್
Share

ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಆವರಣದಲ್ಲಿ ನಡೆಸಿದ ಸಾಂಕೇತಿಕ ನಾಟಕ (Skit) ರಾಜಕೀಯ ಹಾಗೂ ಕಾನೂನು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಬಿಹಾರದ ಪುರ್ನಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ ಸ್ಪಷ್ಟನೆ ನೀಡಿದ್ದಾರೆ. ತಾವು ಧರ್ಮ ಅಥವಾ ನಂಬಿಕೆಯ ವಿರುದ್ಧವಾಗಿಲ್ಲ, ಬದಲಾಗಿ ಧರ್ಮದ ಹೆಸರಿನಲ್ಲಿ ನಡೆಯುವ ಲೂಟಿ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಧಾರ್ಮಿಕ ವಿಡಿಯೋ ಹಂಚಿಕೆ:

ಪ್ರತಿಭಟನೆಯ ಬೆನ್ನಲ್ಲೇ ಹರಿದುಬಂದ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿದ ಪಪ್ಪು ಯಾದವ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕೇಸರಿ ವಸ್ತ್ರ ಧರಿಸಿ, ಹಣೆಗೆ ತಿಲಕ ಮತ್ತು ಕೊರಳಿನಲ್ಲಿ ರುದ್ರಾಕ್ಷಿ ಮಾಲೆಗಳನ್ನು ಹಾಕಿ, ರುದ್ರಾಕ್ಷಿ ಮಾಲೆಗೆ ನೀರು ಸುರಿಯುವ ಮೂಲಕ ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸುವುದು ಕಂಡುಬಂದಿದೆ.

ವಿಡಿಯೋದೊಂದಿಗೆ ಬರೆದುಕೊಂಡಿರುವ ಪಪ್ಪು ಯಾದವ್, “ನನ್ನ ವಿರೋಧ ಸನಾತನ, ಧರ್ಮ, ಕೇಸರಿ ಬಣ್ಣ, ಸಾಧು-ಸಂತರ ಮೇಲಲ್ಲ. ಭಕ್ತಿಯ ಹೆಸರಿನಲ್ಲಿ ಸಾರ್ವಜನಿಕರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ‘ಚಂದಾ ಕದಿಯುವ’ ಲೂಟಿಕೋರರ ವಿರುದ್ಧ ಮಾತ್ರ ನನ್ನ ಹೋರಾಟ. ಧರ್ಮ ಮತ್ತು ಭಕ್ತಿಗೆ ಸದಾ ಗೌರವ ನೀಡುತ್ತೇನೆ, ಆದರೆ ದೇಣಿಗೆ ಕಳ್ಳರ ವಿರುದ್ಧ ನಮ್ಮ ಧ್ವನಿ ಸದಾ ಜೋರಾಗಿರುತ್ತದೆ” ಎಂದು ಪ್ರತಿಪಾದಿಸಿದ್ದಾರೆ.

ಏನಿದು ವಿವಾದ?

ಜುಲೈ 31 ರಂದು ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ‘ಇಂಡಿಯಾ’ (INDIA) ಒಕ್ಕೂಟದ ಸಂಸದರು ಅಯೋಧ್ಯೆ ರಾಮಮಂದಿರದ ದೇಣಿಗೆ ದುರುಪಯೋಗ ಆರೋಪವನ್ನು ಖಂಡಿಸಿ ಮಕರ ದ್ವಾರದ ಬಳಿ ಸಾಂಕೇತಿಕ ನುಕ್ಕಡ್ ನಾಟಕದ ಮೂಲಕ ಪ್ರತಿಭಟನೆ ನಡೆಸಿದ್ದರು. ಈ ನಾಟಕದಲ್ಲಿ ಅರ್ಚಕನ ವೇಷದಲ್ಲಿದ್ದ ಪಪ್ಪು ಯಾದವ್ ದೇಣಿಗೆ ಪೆಟ್ಟಿಗೆಯಿಂದ ಹಣವನ್ನು ಜೇಬಿಗಿಳಿಸಿ ಓಡಿಹೋಗುವ ದೃಶ್ಯವನ್ನು ಅಭಿನಯಿಸಿದ್ದರು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಸಂಸದರು ಭಾಗವಹಿಸಿದ್ದರು.

ಬಿಜೆಪಿ ಆಕ್ರೋಶ & ಪೊಲೀಸ್ ದೂರು:

ಈ ಕೃತ್ಯವು ಸನಾತನ ಧರ್ಮ, ಸಾಧು-ಸಂತರು ಮತ್ತು ಶ್ರೀರಾಮನಿಗೆ ಮಾಡಿದ ಅಪಮಾನ ಎಂದು ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ದೆಹಲಿಯ ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲಿ ಪಪ್ಪು ಯಾದವ್, ರಾಹುಲ್ ಗಾಂಧಿ ಮತ್ತು ಡಿಂಪಲ್ ಯಾದವ್ ಸೇರಿದಂತೆ ಹಲವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ದಾಖಲಾಗಿದ್ದು, ಪೊಲೀಸರು ಕಾನೂನು ಸಲಹೆ ಪಡೆಯುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *