ನವದೆಹಲಿ: ಜೀವನದಲ್ಲಿ ಎದುರಾಗುವ ಒಂದು ಹಿನ್ನಡೆ ಅಥವಾ ನಿರಾಕರಣೆ (Rejection) ನಮ್ಮ ಭವಿಷ್ಯವನ್ನೇ ಬದಲಾಯಿಸಬಹುದು ಎಂಬುದಕ್ಕೆ ಭಾರತ ಮೂಲದ ಟೆಕ್ಕಿ ಪ್ರಚಿಟಿ ಪಾರ್ಕರ್ (Prachiti Parkar) ಅವರ ಕಥೆಯೇ ಅತ್ಯುತ್ತಮ ಉದಾಹರಣೆ.
ಮೈಕ್ರೋಸಾಫ್ಟ್ ಇಂಡಿಯಾ ಕಂಪನಿಯಿಂದ ಉದ್ಯೋಗ ಪ್ರಸ್ತಾವನೆ ತಿರಸ್ಕೃತಗೊಂಡಿದ್ದ ಯುವತಿ, ಇಂದು ಅದೇ ಮೈಕ್ರೋಸಾಫ್ಟ್ನ ಅಮೆರಿಕ ಹೆಡ್ಕ್ವಾರ್ಟರ್ಸ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ 2 (Software Engineer II) ಆಗಿ ಸೇವೆ ಸಲ್ಲಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಭಾವನಾತ್ಮಕ ಪಯಣವನ್ನು ಹಂಚಿಕೊಂಡಿದ್ದಾರೆ.
ಒಂದು ರಿಜೆಕ್ಷನ್ ಬದಲಾಯಿಸಿತು ಭವಿಷ್ಯ!
ಮುಂಬೈನ ವೀರ್ಮಾರ್ತಾ ಜಿಜಾಬಾಯಿ ಟೆಕ್ನಾಲಜಿಕಲ್ ಇನ್ಸ್ಟಿಟ್ಯೂಟ್ (VJTI)ನಲ್ಲಿ ಬಿ.ಟೆಕ್ ಮುಗಿಸಿದ್ದ ಪ್ರಚಿಟಿ, ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಅದೇ ಸಮಯದಲ್ಲಿ ಮೈಕ್ರೋಸಾಫ್ಟ್ ಇಂಡಿಯಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. “ಒಂದು ವೇಳೆ ಭಾರತದಲ್ಲೇ ಮೈಕ್ರೋಸಾಫ್ಟ್ ಕೆಲಸ ಸಿಕ್ಕಿದ್ದರೆ, ನಾನು ಅಮೆರಿಕಕ್ಕೆ ಹೋಗುವ ಪ್ಲಾನ್ ಕೈಬಿಡುತ್ತಿದ್ದೆ” ಎಂದು ಅವರು ‘X’ (ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಮೈಕ್ರೋಸಾಫ್ಟ್ ಇಂಡಿಯಾ ಅವರ ಅರ್ಜಿಯನ್ನು ತಿರಸ್ಕರಿಸಿತು.
ಅಮೆರಿಕದಲ್ಲಿ ಸಾಧನೆ, 4.0 GPA!
ಭಾರತದಲ್ಲಿ ಕೆಲಸ ಸಿಗದಿದ್ದಾಗ ಧೃತಿಗೆಡದ ಪ್ರಚಿಟಿ, ಅಮೆರಿಕದ ಯುಮಾಸ್ ಆಮ್ಹರ್ಸ್ಟ್ (UMass Amherst) ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಎಂ.ಎಸ್ (MS) ಪದವಿಗೆ ಸೇರ್ಪಡೆಯಾದರು. ಅಲ್ಲಿ ಅತ್ಯುತ್ತಮ ಸಾಧನೆ ಮಾಡಿ 4.0 ಜಿಪಿಎ (GPA) ಗ್ರೇಡ್ ಪಡೆಯುವ ಮೂಲಕ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. ಪದವಿ ಮುಗಿಸಿದ ನಂತರ, ಅಮೆರಿಕದ ವಾಷಿಂಗ್ಟನ್ನಲ್ಲಿರುವ ಮೈಕ್ರೋಸಾಫ್ಟ್ ಹೆಡ್ಕ್ವಾರ್ಟರ್ಸ್ನಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಪೋಷಕರ ಕಣ್ಣಲ್ಲಿ ಹೆಮ್ಮೆಯ ನಗು
ಇತ್ತೀಚೆಗೆ ಪ್ರಚಿಟಿ ತಮ್ಮ ತಂದೆ-ತಾಯಿಯನ್ನು ವಾಷಿಂಗ್ಟನ್ನಲ್ಲಿರುವ ಬೃಹತ್ ಮೈಕ್ರೋಸಾಫ್ಟ್ ಕ್ಯಾಂಪಸ್ಗೆ ಕರೆದೊಯ್ದಿದ್ದರು. ಕಂಪನಿಯ ಬೃಹತ್ ವಾತಾವರಣ ಮತ್ತು ಸೌಲಭ್ಯಗಳನ್ನು ಕಂಡು ಅವರ ಪೋಷಕರು ಬೆರಗಾದರು. “ಸಾಮಾನ್ಯವಾಗಿ ನಾನು ನನ್ನ ಪೋಷಕರಲ್ಲಿ ‘ನನ್ನನ್ನು ಕಂಡು ಹೆಮ್ಮೆಯಾಗುತ್ತಿದೆಯೇ?’ ಎಂದು ಕೇಳುತ್ತಿದ್ದೆ, ಆದರೆ ಈ ಬಾರಿ ಅವರ ಮುಖದಲ್ಲಿದ್ದ ನಗುವೇ ಎಲ್ಲವನ್ನೂ ಹೇಳುತ್ತಿತ್ತು” ಎಂದು ಪ್ರಚಿಟಿ ಬರೆದುಕೊಂಡಿದ್ದಾರೆ.
ಅವರ ಈ ಯಶೋಗಾಥೆ ಈಗ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, “ಆರಂಭಿಕ ಹಿನ್ನಡೆಗಳು ದೊಡ್ಡ ಮಟ್ಟದ ಗೆಲುವಿಗೆ ದಾರಿಯಾಗುತ್ತವೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.





Leave a comment