ದಾವಣಗೆರೆ/ಚಿತ್ರದುರ್ಗ: ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ, ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಭಾಗವಹಿಸಿ ಹಲವು ಮಹತ್ವದ ಸಲಹೆಗಳು ಹಾಗೂ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು.
ಸಭೆಯಲ್ಲಿ ಮಾತನಾಡಿದ ಶಾಸಕ ಸಮರ್ಥ್ ಶಾಮನೂರು, ರೈತರ ಹಿತದೃಷ್ಟಿಯಿಂದ ಬೆಳೆ ವಿಮೆ ಯೋಜನೆಯಲ್ಲಿ ಸರ್ಕಾರದಿಂದ ಹೆಚ್ಚಿನ ಸಹಾಯಧನ ನೀಡುವ ಅಗತ್ಯವಿದೆ ಎಂದು ತಿಳಿಸಿದರು. ಬೆಳೆ ವಿಮೆಯ ಕಂತಿನಲ್ಲಿ ಕನಿಷ್ಠ ಶೇ.50 ರಷ್ಟು ಸಬ್ಸಿಡಿ ನೀಡಿದರೆ ಹೆಚ್ಚಿನ ರೈತರು ವಿಮೆ ಮಾಡಿಸಿಕೊಳ್ಳಲು ಮುಂದಾಗಲಿದ್ದು, ಇದರಿಂದ ರೈತರಿಗೆ ಆರ್ಥಿಕ ಭದ್ರತೆ ದೊರೆಯಲಿದೆ ಎಂದು ಹೇಳಿದರು.
ದಾವಣಗೆರೆ ತಾಲೂಕಿನಲ್ಲಿ ಎಸ್‌ಬಿಐ ಜನರಲ್ ಇನ್ಶೂರೆನ್ಸ್ ಮೂಲಕ ಬೆಳೆ ವಿಮೆ ಮಾಡಲಾಗುತ್ತಿದ್ದು, ಮೆಕ್ಕೆಜೋಳ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ಸುಮಾರು ₹2,500 ವಿಮೆ ಕಂತು ಪಾವತಿಸಬೇಕಾಗಿದೆ. ಪರಿಹಾರವಾಗಿ ₹65,000 ದೊರೆಯುವ ವ್ಯವಸ್ಥೆಯಿದ್ದರೂ, ಆರಂಭಿಕ ಕಂತಿನ ಮೊತ್ತವೇ ಅನೇಕ ರೈತರಿಗೆ ಹೊರೆಯಾಗುತ್ತಿದೆ. ಆದ್ದರಿಂದ ವಿಮೆಯ ಕಂತಿನ ಮೊತ್ತವನ್ನು ಕಡಿಮೆಗೊಳಿಸುವ ಕುರಿತು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದರ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ಯೋಜನೆಯ ಪ್ರಯೋಜನ ಪಡೆಯುವಂತೆ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ವ್ಯಾಪಕ ಜಾಗೃತಿ ಮೂಡಿಸಿ, ರೈತರನ್ನು ಯೋಜನೆಗೆ ಸೇರ್ಪಡೆಗೊಳಿಸಲು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಪ್ರಸ್ತಾಪಿಸಿದ ಅವರು, ಗ್ರಾಮ ಪಂಚಾಯಿತಿಗಳು ಪ್ರಮುಖ ಪೈಪ್‌ಲೈನ್‌ಗಳು ಮತ್ತು ದೊಡ್ಡ ನೀರು ಸರಬರಾಜು ಘಟಕಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಣ್ಣ ಪೈಪ್‌ಲೈನ್‌ಗಳು ಹಾಗೂ ಕಡಿಮೆ ಸಾಮರ್ಥ್ಯದ ನೀರಿನ ಮೂಲಗಳ ನಿರ್ವಹಣೆ ಕಡೆಗಣನೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಕುಡಿಯುವ ನೀರಿನ ಮೂಲಗಳ ನಿರ್ವಹಣೆಗೆ ಸಮಾನ ಆದ್ಯತೆ ನೀಡಿ ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಮತ್ತಷ್ಟು ಪರಿಣಾಮಕಾರಿಯಾಗಲು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಪಿಡಿಒ, ಆರ್‌ಐ/ಆರ್‌ಎಲ್‌ಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯವಾಗಿ ವಾಸ್ತವ್ಯ ಹೂಡಿ ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಸಭೆಯಲ್ಲಿ ಸಚಿವರುಗಳಾದ ಈಶ್ವರ್ ಖಂಡ್ರೆ,ರಾಮಲಿಂಗಾರೆಡ್ಡಿ,ಕೆ.ಹೆಚ್ ಮುನಿಯಪ್ಪ ಸೇರಿದಂತೆ ಶಾಸಕರಾದ ಎಸ್ ಎಸ್ ಮಲ್ಲಿಕಾರ್ಜುನ್, ಡಿ.ಜಿ ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್ ಬಸವಂತಪ್ಪ ಮತ್ತು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- Chitradurga Review Meeting
- Crop Insurance Subsidy
- Davanagere South MLA
- DK Shivakumar
- Karnataka News
- Maize Crop Insurance
- PDO Village Residence
- Rural Drinking Water
- Samarth Shamanur
- ಕರ್ನಾಟಕ ಕೃಷಿ ಸುದ್ದಿ
- ಗ್ರಾಮೀಣ ಕುಡಿಯುವ ನೀರು
- ಚಿತ್ರದುರ್ಗ ಪ್ರಗತಿ ಪರಿಶೀಲನಾ ಸಭೆ
- ಡಿ. ಕೆ. ಶಿವಕುಮಾರ್
- ದಾವಣಗೆರೆ ದಕ್ಷಿಣ ಶಾಸಕ
- ಪಿಡಿಒ ಸ್ಥಳೀಯ ವಾಸ್ತವ್ಯ
- ಬೆಳೆ ವಿಮೆ ಸಬ್ಸಿಡಿ
- ಮೆಕ್ಕೆಜೋಳ ಬೆಳೆ ವಿಮೆ
- ಸಮರ್ಥ್ ಶಾಮನೂರು





Leave a comment