ದಾವಣಗೆರೆ: ಕಾಕ್ರೋಚ್ ಜನತಾ ಪಾರ್ಟಿ ಜೊತೆ ಸೇರಿಕೊಂಡು ಪ್ರತಿಭಟನೆ ನಡೆಸಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಮುಖಂಡರು ವಿದ್ಯಾರ್ಥಿಗಳನ್ನು ರಾಜಕೀಯ ದಾಳವಾಗಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರತಿಭಟನೆ ನಡೆಸಲು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಆದರೆ ದೆಹಲಿಯಲ್ಲಿ ನೀಟ್ ಪತ್ರಿಕೆ ಸೋರಿಕೆ ವಿರೋಧಿಸಿ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದನ್ನು ನೋಡಿಕೊಂಡು ಪೊಲೀಸರು ಸುಮ್ಮನೆ ಕುಳಿತರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಲು ಆಗದು. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದನ್ನು ಬಿಟ್ಟು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ಚರ್ಚೆಗೆ ಸರ್ಕಾರ ಸಿದ್ಧವಿದ್ದರೂ ಕಾಂಗ್ರೆಸ್ ರಾಜಕೀಯ ನಾಟಕ ಮಾಡುತ್ತಿದೆ. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅವರ ಉದ್ದೇಶವಲ್ಲ, ಕೇವಲ ರಾಜಕೀಯ ಹಿತಾಸಕ್ತಿ ಸೃಷ್ಟಿಸುವುದು ಅವರ ಗುರಿ ಎಂಬುದು
ಸ್ಪಷ್ಟ. ಪ್ರಧಾನಿ ನರೇಂದ್ರ ಮೋದಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯನ್ನು “ಘೋರ ಪಾಪ” ಎಂದಿದ್ದಾರಲ್ಲದೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರೂ ಕಾಕ್ರೋಚ್ ಜನತಾ ಪಾರ್ಟಿ ಜೊತೆ ಕೈಜೋಡಿಸಿ ಶಾಂತಿಯುತವಾಗಿದ್ದ
ದೇಶದ ರಾಜಧಾನಿಯಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿರುವ ಕಾಂಗ್ರೆಸ್ ನಿಜಬಣ್ಣ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್, ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗಲಿ ಎಂಬ ಘೋಷಣೆಗಳನ್ನು ತುಕ್ಡೆ ಗ್ಯಾಂಗ್ ಗಳು ಪ್ರತಿಭಟನೆ ವೇಳೆ ಕೂಗುವ ಅವಶ್ಯಕತೆ ಏನಿತ್ತು? ಕಾಂಗ್ರೆಸ್, ಎಡಪಂಥೀಯ ಸಂಘಟನೆಗಳಿಗೆ ಸೇರಿದವರೇ ಹೆಚ್ಚಿದ್ದರೆ ಹೊರತು ವಿದ್ಯಾರ್ಥಿಗಳಲ್ಲ ಎಂದಿರುವ ಅವರು, ತಿಭಟನೆಯ ಹೆಸರಿನಲ್ಲಿ ಸಂಸತ್ತಿಗೆ ಮುತ್ತಿಗೆ ಹಾಕುವುದು, ಹಿಂಸಾಚಾರಕ್ಕೆ ಪ್ರಚೋದನೆ ನೀಡುವುದು, ಕಲ್ಲು ತೂರಾಟ ನಡೆಸುವುದು, ಅರಾಜಕತೆ ಸೃಷ್ಟಿಸುವುದು ಅಥವಾ ದೇಶವನ್ನು ಅಸ್ಥಿರಗೊಳಿಸಿ ವಿಭಜಿಸುವ ಸಂಚು ಯಶಸ್ವಿಯಾಗಿಲ್ಲ. ಇದನ್ನು ಮೆಟ್ಟಿ ನಿಲ್ಲುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅಭಿವೃದ್ಧಿಪರ ಇದ್ದು, ನೀಟ್ ಪತ್ರಿಕೆ ಸೋರಿಕೆ ಒಂದು ಕಡೆ ಆಗಿ ಆನಂತರ ಮೊಬೈಲ್ ಸೇರಿದಂತೆ ಇತರ ರೀತಿಯಲ್ಲಿ ಹೋಗಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು, ಆದರೂ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ವಿರೋಧಿಸಬೇಕು ಎಂದು ಹೇಳಿದ್ದಾರೆ.
ಆರ್ಥಿಕತೆಯಲ್ಲಿ ಭಾರತವು ವಿಶ್ವದಲ್ಲಿ ಮುನ್ನುಗ್ಗುತ್ತಿದೆ. ಇದನ್ನು ಸಹಿಸದ ವಿರೋಧ ಪಕ್ಷಗಳು ಅಮೆರಿಕಾ, ಪಾಕಿಸ್ತಾನ, ಚೀನಾ ಸೇರಿದಂತೆ ಇತರೆ ರಾಷ್ಟ್ರಗಳ ಜೊತೆ ಕೈಜೋಡಿಸಿ ಕೆಟ್ಟ ಹೆಸರು ತರುವ ಸಂಚು ರೂಪಿಸುತ್ತಿವೆ. ಕಾಕ್ರೋಚ್ ಜನತಾ ಪಕ್ಷವು ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುವ ವಿಚಾರ ನೆಪವಾಗಿಟ್ಟುಕೊಂಡು ಕೇಂದ್ರ ವಿರುದ್ಧ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ವಿದೇಶಿ ದ್ರೋಹಿಗಳ ಕೈವಾಡವೂ ಇದ್ದು, ಕಾಂಗ್ರೆಸ್ ಇದನ್ನೇ ಬಂಡವಾಳವಾಗಿಸಿಕೊಂಡು ಸರ್ಕಾರದ ವಿರುದ್ಧ ಯುವಕರ ಎತ್ತಿಕಟ್ಟುವ ಹುನ್ನಾರ ಫಲಿಸದು ಎಂದು ರಾಜನಹಳ್ಳಿ ಶಿವಕುಮಾರ್ ಅವರು ತಿಳಿಸಿದ್ದಾರೆ.





Leave a comment