ದಾವಣಗೆರೆ: ತುರ್ತು ಪರಿಸ್ಥಿತಿಗಳು ಮತ್ತು ಅಗ್ನಿ ಅವಘಡಗಳು ಸಂಭವಿಸಿದಾಗ ಸಾರ್ವಜನಿಕರು ಆತಂಕಗೊಳ್ಳದೆ, ಸಂಯಮದಿಂದ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಹಾಲಿಂಗಪ್ಪ ಎಸ್. ಲಂಗೋಟಿ ಅಭಿಪ್ರಾಯಪಟ್ಟರು.
ನಗರದ ಸಿದ್ದಲಿಂಗೇಶ್ವರ ಸಿದ್ದಗಂಗಾ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಶಾಲಾ ವಿದ್ಯಾರ್ಥಿಗಳಿಗೆ ಅಗ್ನಿ ಮತ್ತು ವಿಪತ್ತು ನಿರ್ವಹಣೆ’ ಕುರಿತ ಜಾಗೃತಿ ಕಾರ್ಯಕ್ರಮ ಹಾಗೂ ಅಣುಕು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಯಾವುದೇ ಸಣ್ಣ-ಪುಟ್ಟ ಅವಘಡಗಳು, ಭೂಕುಸಿತ, ಅಗ್ನಿ ದುರಂತ ಅಥವಾ ಕಟ್ಟಡ ಕುಸಿತದಂತಹ ಘಟನೆಗಳು ಸಂಭವಿಸಿದಾಗ ಮೊಟ್ಟಮೊದಲಿಗೆ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೊದಲ ಸ್ಪಂದಕರಾಗಿ ಕೆಲಸ ಮಾಡುತ್ತಾರೆ. ತದನಂತರ ಹೆಚ್ಚಿನ ನೆರವು ಮತ್ತು ತಾಂತ್ರಿಕ ರಕ್ಷಣಾ ಕಾರ್ಯಾಚರಣೆಯ ಅಗತ್ಯವಿದ್ದಾಗ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೆತ್ತಿಕೊಳ್ಳುತ್ತದೆ
ಎಂದರು.
ದಾವಣಗೆರೆಯಲ್ಲಿರುವ ಎಸ್‌ಡಿಆರ್‌ಎಫ್ ತಂಡವು ಜಿಲ್ಲಾಡಳಿತದ ಅಡಿಯಲ್ಲಿ, ಅಂದರೆ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಕೆಲಸ ಮಾಡುತ್ತದೆ. ಜಿಲ್ಲಾ ಮಟ್ಟದಲ್ಲಿರುವ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಈ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತವೆ ಎಂದರು.
ಎಲ್ಲಾ ರೀತಿಯ ಬೆಂಕಿಯನ್ನು ನಂದಿಸಲು ನೀರು ಬಳಸಬಾರದು. ರಾಸಾಯನಿಕ ಅವಘಡಗಳ ಸಂದರ್ಭದಲ್ಲಿ ನೀರಿನ ಬಳಕೆ ಅಪಾಯಕಾರಿ. ಇಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಅರಿತು ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅಡುಗೆ ಅನಿಲ ಸಿಲಿಂಡರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಅದನ್ನು ಹತೋಟಿಗೆ ತರುವ ಸರಳ ವಿಧಾನಗಳು, ಕಟ್ಟಡಗಳಲ್ಲಿ ಬೆಂಕಿ ತಗುಲಿದಾಗ ಪ್ರಾಣಾಪಾಯವಿಲ್ಲದೆ ಹೊರಬರುವ ಕೌಶಲಗಳು, ಹಗ್ಗ ಮತ್ತು ಏಣಿಗಳ ಸಹಾಯದಿಂದ ಕಟ್ಟಡದಲ್ಲಿ ಸಿಲುಕಿದವರನ್ನು ರಕ್ಷಿಸುವ ತಾಂತ್ರಿಕ ಪ್ರದರ್ಶನ, ಬೆಂಕಿ ನಂದಿಸುವ ಸಿಲಿಂಡರ್‌ಗಳು ಮತ್ತು ತುರ್ತು ವಾಹನಗಳ ಸಮರ್ಪಕ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕಾ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡಲಾಯಿತು.
ಯಾವುದೇ ಅಗ್ನಿ ದುರಂತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರು ಕೂಡಲೇ 101 ಅಥವಾ 112 ಗೆ ಕರೆ ಮಾಡಬೇಕು. ವೈದ್ಯಕೀಯ ತುರ್ತು ಸೇವೆಗಾಗಿ 108 ಸಹಾಯವಾಣಿಯನ್ನು ಸಂಪರ್ಕಿಸಬಹುದಾಗಿದೆ. ಅಗ್ನಿಶಾಮಕ ದಳವು ಸಾರ್ವಜನಿಕರ ಸೇವೆಗಾಗಿ 24/7 ಸನ್ನದ್ಧವಾಗಿರುತ್ತದೆ ಎಂದು ತಿಳಿಸಿದರು.





Leave a comment