Home ದಾವಣಗೆರೆ ಭದ್ರಾ ಜಲಾಶಯದಲ್ಲಿ ತೀವ್ರ ಕುಸಿದ ನೀರಿನ ಮಟ್ಟ: ದಾವಣಗೆರೆ ಜಿಲ್ಲೆಯ 48 ಹಳ್ಳಿಗಳಲ್ಲಿ ಜಲಸಂಕಷ್ಟದ ಆತಂಕ!
ದಾವಣಗೆರೆಬೆಂಗಳೂರು

ಭದ್ರಾ ಜಲಾಶಯದಲ್ಲಿ ತೀವ್ರ ಕುಸಿದ ನೀರಿನ ಮಟ್ಟ: ದಾವಣಗೆರೆ ಜಿಲ್ಲೆಯ 48 ಹಳ್ಳಿಗಳಲ್ಲಿ ಜಲಸಂಕಷ್ಟದ ಆತಂಕ!

Share
ಭದ್ರಾ ಜಲಾಶಯ
Share

ದಾವಣಗೆರೆ: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದ್ದರೂ, ಹವಾಮಾನ ಇಲಾಖೆಯ ವರದಿ ಪ್ರಕಾರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಭದ್ರಾ ಜಲಾಶಯದಲ್ಲಿ ತೀವ್ರ ಕುಸಿದ ನೀರಿನ ಮಟ್ಟದಿಂದ ರೈತರು ಕಂಗಾಲಾಗಿದ್ದಾರೆ. ದಾವಣಗೆರೆ ಜಿಲ್ಲೆಯ 48 ಹಳ್ಳಿಗಳಲ್ಲಿ ಜಲಸಂಕಷ್ಟದ ಆತಂಕ ಎದುರಾಗಿದೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಮೇವಿನ ಅಭಾವ ತಲೆದೋರದಂತೆ ಸರ್ಕಾರ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಯಾರು ಆತಂಕಪಡುವ ಅಗತ್ಯ ಇಲ್ಲವೆಂದು  ಇಂಧನ, ಪ್ರವಾಸೋದ್ಯಮ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ‘ಪ್ರಕೃತಿ ವಿಕೋಪ ನಿರ್ವಹಣೆಯ ಪ್ರಗತಿ ಪರಿಶೀಲನಾ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮಾಹಿತಿ ನೀಡಿ, ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ ಜಲಸಂಕಷ್ಟ ಎದುರಾಗುವ ಆತಂಕವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಶೇಕಡಾ 58 ರಷ್ಟು ಮಳೆ ಕೊರತೆಯಾಗಿದೆ. ಜೂನ್ ತಿಂಗಳಿನಿಂದ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದ್ದರಿಂದ, ಜಿಲ್ಲೆಯಲ್ಲಿ ಇದುವರೆಗೆ ಕೇವಲ ಶೇ. 8 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ ಕಳೆದ ವರ್ಷ ಇದೇ ಅವಧಿಗೆ ಶೇ.  60 ರಿಂದ 65 ರಷ್ಟು ಬಿತ್ತನೆಯಾಗಿತ್ತು ಎಂದರು.

ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆ ತೀವ್ರವಾಗಿ ಕುಸಿದಿದೆ. ಕಳೆದ ವರ್ಷ 186 ಅಡಿಗಳಷ್ಟಿದ್ದ ನೀರಿನ ಮಟ್ಟ ಈ ಬಾರಿ ಕೇವಲ 136 ಅಡಿಗೆ ತಲುಪಿದೆ. 

ಜಲಾಶಯಕ್ಕೆ ಒಳಹರಿವು ಕಳೆದ ವರ್ಷ 12,000 ಕ್ಯೂಸೆಕ್ ಇತ್ತು, ಆದರೆ ಪ್ರಸ್ತುತ ಕೇವಲ 211 ಕ್ಯೂಸೆಕ್ ಮಾತ್ರ ಇದೆ. ಜಲಾಶಯದಲ್ಲಿ ಕನಿಷ್ಠ 15 ಟಿಎಂಸಿ ನೀರು ಸಂಗ್ರಹವಾಗದಿದ್ದರೆ ಕುಡಿಯುವ ನೀರಿಗೂ ಭಾರಿ ಸಮಸ್ಯೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆಯಾಗಿ ಈಗಾಗಲೇ ಮುಂದಿನ 4 ತಿಂಗಳಿಗಾಗುವಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೇ ಮಾಧವ ವಿಠ್ಠಲರಾವ್‌ ಅವರು ಮಾತನಾಡಿ, ಜಿಲ್ಲೆಯ 194 ಗ್ರಾಮ ಪಂಚಾಯತ್‌ಗಳ ಪೈಕಿ 14 ಗ್ರಾಮ ಪಂಚಾಯತ್‌ಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದರು.

ಸದ್ಯಕ್ಕೆ ಒಂದು ಗ್ರಾಮಕ್ಕೆ ಟ್ಯಾಂಕರ್ ಮೂಲಕ ಹಾಗೂ 13 ಕಡೆಗಳಲ್ಲಿ ಖಾಸಗಿ ಬೋರ್‌ವೇಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮಳೆ ಬರದಿದ್ದರೆ ಸುಮಾರು 48 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳಬಹುದು ಎಂದರು.

ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸರ್ಕಾರದಿಂದ 3 ಕೋಟಿ ರೂಪಾಯಿ ತುರ್ತು ನಿಧಿ ಬಿಡುಗಡೆಯಾಗಿದ್ದು, ಮೊದಲ ಹಂತದಲ್ಲಿ 1 ಕೋಟಿ ರೂಪಾಯಿ ಬಳಸಿಕೊಂಡು ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಮೂಲಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾದ್ಯಂತ 36 ಹೊಸ ಬೋರ್‌ವೇಲ್‌ಗಳನ್ನು ಕೊರೆಯಿಸಲಾಗಿದ್ದು, ಅವುಗಳಲ್ಲಿ 30 ಯಶಸ್ವಿಯಾಗಿವೆ ಎಂದರು.

ಕಲುಷಿತ ನೀರಿನ ಸಮಸ್ಯೆ ತಡೆಯಲು ಪ್ರತಿದಿನ ಮೈಕ್ರೋಬಯಾಲಜಿಕಲ್ ಮತ್ತು ಕೆಮಿಕಲ್ ಲ್ಯಾಬ್‌ಗಳಲ್ಲಿ ನೀರಿನ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ತಿಂಗಳು ಓವರ್ ಹೆಡ್ ಟ್ಯಾಂಕ್‌ಗಳನ್ನು (OHT) ಕಡ್ಡಾಯವಾಗಿ ಸ್ವಚ್ಛಗೊಳಿಸಿ, ಜಿಪಿಎಸ್ ಫೋಟೋ ಅಪ್‌ಲೋಡ್ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕ ಸಹಾಯವಾಣಿಗೆ ಬಂದಿದ್ದ 45 ದೂರುಗಳನ್ನು ಈಗಾಗಲೇ ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೊನ್ನಾಳಿ ಶಾಸಕ ಶಾಂತನಗೌಡ ರವರು ಮಾತನಾಡಿ, ನದಿಯ ನೀರನ್ನು ಪಂಪ್‌ಸೆಟ್, ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ಅನಧಿಕೃತವಾಗಿ ಎತ್ತುತ್ತಿರುವುದರಿಂದ ಚಾನೆಲ್‌ನ ಕೊನೆಯ ಭಾಗದ (ಟೇಲ್ ಎಂಡ್) ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಪತ್ತೆ ಹಚ್ಚುವ ಮಾದರಿಯಲ್ಲೇ, ನೀರಾವರಿ ಇಲಾಖೆಯಲ್ಲೂ ಅಕ್ರಮ ನೀರು ಎತ್ತುವಿಕೆಯನ್ನು ತಡೆಯಲು ಕಠಿಣ ನಿಗಾ ವಹಿಸುವ ವಿಶೇಷ ಸ್ಕ್ವಾಡ್ (ವಿಶೇಷ ಕಾರ್ಯಪಡೆ) ರಚನೆ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.

ಹರಪನಹಳ್ಳಿ ಕ್ಷೇತ್ರದ ಶಾಸಕಿ ಎಂ.ಪಿ. ಲತಾ ಅವರು ಮಾತನಾಡಿ, “ರೈತರ ಜಮೀನುಗಳಲ್ಲಿರುವ ಟ್ರಾನ್ಸ್‌ಫಾರ್ಮರ್ ಕೆಟ್ಟುಹೋದರೆ ರೈತರೇ ತಮ್ಮ ವಾಹನದಲ್ಲಿ ಅದನ್ನು ತಂದು ರಿಪೇರಿ ಮಾಡಿಸಿಕೊಂಡು ಹೋಗಬೇಕಾಗಿದೆ. ಇದು ರೈತರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ” ಎಂದು ಸಚಿವರ ಗಮನಕ್ಕೆ ತಂದರು.

ಹರಿಹರ ಶಾಸಕ ಹರೀಶ್‌ ಅವರು ಮಾತನಾಡಿ, ಮಳೆ ಕೊರತೆಯಿಂದಾಗಿ ಮುಂದಿನ ದಿನಗಳಲ್ಲಿ ಹರಿಹರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಬ್ಯಾರೇಜ್ ಸ್ಥಳದಿಂದ ಹರಿಹರ ನಗರಕ್ಕೆ ನೀರು ಒದಗಿಸುವ ಯೋಜನೆ ರೂಪಿಸಬೇಕು ಮನವಿ ಮಾಡಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಅವರು ಮಾತನಾಡಿ, ಸದ್ಯಕ್ಕೆ ಚನ್ನಗಿರಿಗೆ ಶಾಂತಿಸಾಗರ ಕೆರೆಯ ಮೇಲೆ ಶೇ.70 ರಷ್ಟು ಅವಲಂಬಿತವಾಗಿದ್ದು, ನೀರಿನ ಆತಂಕ ಹೆಚ್ಚಾಗಿದೆ. ಚನ್ನಗಿರಿ ತಾಲೂಕು ಇಂಫೌಂಡಿಂಗ್ ಜಲಾಶಯದ ಮೇಲೆ ಅವಲಂಬಿತವಾಗಿದ್ದು, ಮಾಯಾಕೊಂಡ ಕ್ಷೇತ್ರದ ಜೆ.ಜೆ.ಎಂ ಯೋಜನೆಗಳಿಗೆ ಕೇವಲ 15 ರಿಂದ 20 ದಿನಗಳಿಗಾಗುವಷ್ಟು ಮಾತ್ರ ನೀರಿದೆ ಎಂದರು, ಹೊಸ ಬೋರೆವೆಲ್‌ ಕೊರೆಸಲು ಅನುಮತಿ ನೀಡಿ ನೀರಿನ ಅಭಾವವನ್ನು ತಪ್ಪಿಸುವಂತೆ ತಿಳಿಸಿದರು.

ಮಾಯಾಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರು ಮಾತನಾಡಿ, ಮಾಯಾಕೊಂಡ ಕ್ಷೇತ್ರದಲ್ಲಿ ನೀರಿನ ಆತಂಕ ಹೆಚ್ಚಾಗಿದೆ. 25 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ ಕೆರೆಗಳಿಗೆ ನೀರು ತುಂಬಿಸುವ ಅನುದಾನ ಬಿಡುಗಡೆ ಮಾಡಿ ಅನುಮತಿ ನೀಡುವಂತೆ ತಿಳಿಸಿದರು.

ದಾವಣಗೆರೆ ದಕ್ಷಿಣ ವಿಧಾನ ಸಭೆ ಸದಸ್ಯ ಸಮರ್ಥ ಶಾಮನೂರು ಮಲ್ಲಿಕಾರ್ಜುನ ಅವರು ಮಾತನಾಡಿ, ದೀರ್ಘಕಾಲೀನ ನೀರಿನ ಭದ್ರತೆ ಮತ್ತು ಮಳೆ ನೀರು ಕೊಯ್ಲು ಮುಂದಿನ ಐದು ವರ್ಷಗಳಲ್ಲಿ ಎದುರಾಗಬಹುದಾದ ‘ಎಲ್ ನಿನೋ’ದಂತಹ ಬರಗಾಲದ ಪರಿಸ್ಥಿತಿಯನ್ನು ಎದುರಿಸಲು ದೀರ್ಘಕಾಲೀನ ಯೋಜನೆಗಳ ಅಗತ್ಯವಿದೆ ಎಂದು ತಿಳಿಸಿದರು.

 ಇಂಧನ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರಾದ ಕೆ.ಜೆ. ಜಾರ್ಜ್ ಅವರು ಮಾತನಾಡಿ, ಪ್ರತಿಯೊಂದು ಗ್ರಾಮ ಪಂಚಾಯಿತಿಯ ಪಿಡಿಒಗಳು (PDO) ತಮ್ಮ ಖಾತೆಯಲ್ಲಿರುವ ಲಭ್ಯವಿರುವ ಅನುದಾನವನ್ನು ಹಳೇ ಬಿಲ್‌ಗಳನ್ನು ಪಾವತಿಸಲು ಮಾಡಲು ಬಳಸಬಾರದು. ಬದಲಿಗೆ, ಪ್ರಸ್ತುತ ಎದುರಾಗಿರುವ ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಮೊದಲ ಆದ್ಯತೆ ನೀಡಬೇಕು ಎಂದರು.

Share

Leave a comment

Leave a Reply

Your email address will not be published. Required fields are marked *

Related Articles