Home ದಾವಣಗೆರೆ ಐಐಟಿ ಹೆಸರಲ್ಲಿ ಹೆಚ್. ಡಿ. ದೇವೇಗೌಡರ ಕುಟುಂಬದಿಂದ ಭೂಕಬಳಿಕೆ ಸಂಚು? ಸಿಎಂ ಸಭೆಯಲ್ಲಿ ಗಂಭೀರ ಆರೋಪ ಮಾಡಿದ ಹಾಸನ ರೈತರು!
ದಾವಣಗೆರೆನವದೆಹಲಿಬೆಂಗಳೂರು

ಐಐಟಿ ಹೆಸರಲ್ಲಿ ಹೆಚ್. ಡಿ. ದೇವೇಗೌಡರ ಕುಟುಂಬದಿಂದ ಭೂಕಬಳಿಕೆ ಸಂಚು? ಸಿಎಂ ಸಭೆಯಲ್ಲಿ ಗಂಭೀರ ಆರೋಪ ಮಾಡಿದ ಹಾಸನ ರೈತರು!

Share
ಹೆಚ್. ಡಿ. ದೇವೇಗೌಡ
Share

ಬೆಂಗಳೂರು: ಹಾಸನದಲ್ಲಿ ಉದ್ದೇಶಿತ ಐಐಟಿ (IIT) ಯೋಜನೆಗಾಗಿ ಭೂಮಿ ಕಳೆದುಕೊಂಡು ಕಳೆದ ಇಪ್ಪತ್ತು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿರುವ ದೊಡ್ಡಹೊನ್ನೇನಹಳ್ಳಿ, ಕಾಚಾನಾಯಕನಹಳ್ಳಿ ಸೇರಿದಂತೆ 7 ಹಳ್ಳಿಗಳ ಭೂಸಂತ್ರಸ್ತ ರೈತರಿಗೆ ನ್ಯಾಯಾಲಯದ ಆದೇಶದನ್ವಯ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಾಸನ ಜಿಲ್ಲಾ ರೈತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಮುಖ್ಯಮಂತ್ರಿಗಳು, ರೈತರ ಸಮ್ಮುಖದಲ್ಲೇ ಅಧಿಕಾರಿಗಳಿಂದ ನಕ್ಷೆ ಹಾಗೂ ಇಲಾಖೆಯ ಅಧಿಕೃತ ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿದರು.

“ನಾನು ಬಿಡದಿ ರೈತರಿಗೆ ಒಂದು ನ್ಯಾಯ, ಹಾಸನ ರೈತರಿಗೆ ಮತ್ತೊಂದು ನ್ಯಾಯ ಮಾಡುವುದಿಲ್ಲ. ರೈತರ ಕೈಗೆ ಹೆಚ್ಚಿಗೆ ಹಣ ಬಂದರೆ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವವನು ನಾನು. ನಮ್ಮ ಸರ್ಕಾರ ಸದಾ ರೈತರ ಪರವಾಗಿ ಇರಲಿದೆ” ಎಂದು ಸಿಎಂ ಈ ವೇಳೆ ಸ್ಪಷ್ಟಪಡಿಸಿದರು.

ಹೆಚ್. ಡಿ. ದೇವೇಗೌಡರ ಕುಟುಂಬದ ವಿರುದ್ಧ ಭೂಕಬಳಿಕೆಯ ಗಂಭೀರ ಆರೋಪ!

ಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡ ರೈತರು, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಹೆಚ್.ಡಿ. ರೇವಣ್ಣ ಅವರ ಕುಮ್ಮಕ್ಕಿನಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ನಾವು ನಿರಂತರ ತೊಂದರೆ ಅನುಭವಿಸುತ್ತಿದ್ದೇವೆ ಎಂದು ದೂರಿದರು. ಐಐಟಿ ಈಗಾಗಲೇ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದರೂ, ಅದರ ಹೆಸರಿನಲ್ಲಿ ‘ಎಚ್ ಡಿ ದೇವೇಗೌಡ ಎಜುಕೇಷನ್ ಟ್ರಸ್ಟ್’ ಮಾಡಲು ಗೌಡರ ಕುಟುಂಬ ನಮ್ಮ ಫಲವತ್ತಾದ ಭೂಮಿಯನ್ನು ಕಬಳಿಸಲು ಸಂಚು ರೂಪಿಸಿದೆ ಎಂದು ರೈತರು ಗಂಭೀರ ಆರೋಪ ಮಾಡಿದರು. ಆರಂಭದಲ್ಲಿ 334 ಎಕರೆ ಎಂದು ಹೇಳಿ, ಬಳಿಕ ಅದನ್ನು 1057 ಎಕರೆಗೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಪೇಪರ್ ಮೇಲಷ್ಟೇ ಉಳಿದಿದೆ ಪರಿಹಾರ!

“ವರ್ಷಕ್ಕೆ ಎರಡು ಬಾರಿ ಪರಿಹಾರ ಪಡೆದುಕೊಳ್ಳಿ ಎಂದು ನೋಟಿಸ್ ನೀಡುವ ಅಧಿಕಾರಿಗಳು, ಅಲ್ಲಿಗೆ ಹೋದರೆ ಹಾಸನಕ್ಕೆ ಹೋಗಿ, ಮೈಸೂರಿಗೆ ಹೋಗಿ ಎಂದು ಅಲೆದಾಡಿಸುತ್ತಿದ್ದಾರೆ. ನಿವೇಶನ ಕೇಳಿದರೆ ಲಭ್ಯವಿಲ್ಲ ಎಂದು ಹಿಂಬರಹ ನೀಡುತ್ತಾರೆ. 2007ರಲ್ಲಿ ಎಕರೆಗೆ ಕೇವಲ 15 ರಿಂದ 25 ಲಕ್ಷ ರೂ. ಪರಿಹಾರ ನಿಗದಿ ಮಾಡಲಾಗಿತ್ತು. ಆದರೆ ಪ್ರಸ್ತುತ ಆ ಜಾಗ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಚದರ ಅಡಿಗೆ 7-8 ಸಾವಿರ ರೂ. ಮಾರುಕಟ್ಟೆ ದರವಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಕೋರ್ಟ್ ನಿರ್ದೇಶನದಂತೆ 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಸೈಟುಗಳನ್ನು ನೀಡಿಲ್ಲ” ಎಂದು ರೈತರು ಸಿಎಂ ಗಮನಕ್ಕೆ ತಂದರು. “ನಮಗೆ ಪರಿಹಾರವೂ ಬೇಡ, ಸೈಟೂ ಬೇಡ; ನಮ್ಮ ಜಮೀನನ್ನು ನಮಗೆ ವಾಪಸ್ (ಡಿನೋಟಿಫೈ) ಮಾಡಿಕೊಡಿ” ಎಂದೂ ಹಲವು ರೈತರು ಮನವಿ ಮಾಡಿದರು.

ಸ್ಥಳದಲ್ಲೇ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ರೈತರ ಪರವಾಗಿ ಮಾತನಾಡಿದ ಶಾಸಕ ಶಿವಲಿಂಗೇಗೌಡ, “ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೋಟ್ಯಂತರ ರೂ. ಮೌಲ್ಯದ ಜಾಗವನ್ನು ದೋಚಲು ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಹಾಸನಕ್ಕೆ ಐಐಟಿ ತರುವುದಾದರೆ ನಾವು 350 ಎಕರೆ ಕೊಡಿಸಲು ಸಿದ್ಧರಿದ್ದೇವೆ” ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಂಸದ ಶ್ರೇಯಸ್ ಪಟೇಲ್, ಶಾಸಕ ಶಿವಲಿಂಗೇಗೌಡ, ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಚರ್ಚಿಸಿದ ಸಿಎಂ ಡಿ.ಕೆ. ಶಿವಕುಮಾರ್, ಪ್ರಕರಣದ ಎಲ್ಲ ಆಯಾಮಗಳನ್ನು ಪರಿಶೀಲಿಸಿ, ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸೂಕ್ತ ಪರಿಹಾರ ಮಾರ್ಗವನ್ನು ಪ್ರಕಟಿಸುವುದಾಗಿ ಸಿಎಂ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles