Home ಕ್ರೈಂ ನ್ಯೂಸ್ ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲೇ ಬಿದ್ದು 17 ವರ್ಷದ ಬಾಲಕಿ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಲಸಿಕೆ ಪಡೆದ ಕೆಲವೇ ಕ್ಷಣಗಳಲ್ಲೇ ಬಿದ್ದು 17 ವರ್ಷದ ಬಾಲಕಿ ಸಾವು: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ!

Share
ಲಸಿಕೆ
Share

ನಾಸಿಕ್: ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಬುಧವಾರ ಮಧ್ಯಾಹ್ನ ಸಾರ್ವಜನಿಕ ಲಸಿಕಾ ಶಿಬಿರದಲ್ಲಿ ಧನುರ್ವಾಯು (ಟೆಟಾನಸ್) ಮತ್ತು ಡಿಫ್ತೀರಿಯಾ (ಟಿಡಿ) ಬೂಸ್ಟರ್ ಲಸಿಕೆ ಪಡೆದ ಕೆಲವೇ ನಿಮಿಷಗಳಲ್ಲಿ 17 ವರ್ಷದ ಯುವತಿಯೊಬ್ಬಳು ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಗಂಭೀರ ಘಟನೆ ನಡೆದಿದೆ. ಯುವತಿ ಪ್ರಜ್ಞೆ ತಪ್ಪಿ ಬೀಳುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಸಿಕ್ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲಾಗಿದ್ದ ದಿನನಿತ್ಯದ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಯುವತಿಗೆ ಮಧ್ಯಾಹ್ನ ಸುಮಾರು 12.40 ಕ್ಕೆ ಚುಚ್ಚುಮದ್ದು ನೀಡಲಾಗಿತ್ತು. ಲಸಿಕೆ ಪಡೆದ ತಕ್ಷಣ ತಲೆಸುತ್ತು ಬರುತ್ತಿರುವುದಾಗಿ ಹೇಳಿದ ಆಕೆ, ಲಸಿಕಾ ಕೇಂದ್ರದ ಸಮೀಪದ ವೈದ್ಯಕೀಯ ಅಂಗಡಿಯ ಬಳಿ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೆಳಗೆ ಬೀಳುವ ರಭಸಕ್ಕೆ ಆಕೆಯ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣವೇ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಯುವತಿಯ ಸಾವು ಲಸಿಕೆಯಿಂದಲೇ ಸಂಭವಿಸಿದೆ ಎಂದು ಆಕೆಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಲಸಿಕೆ ಬ್ಯಾಚ್ ಅಮಾನತು, ತನಿಖೆ ಚುರುಕು:

ಮುಂಜಾಗ್ರತಾ ಕ್ರಮವಾಗಿ ಆಕೆ ಪಡೆದ ಲಸಿಕೆಯ ಇಡೀ ಬ್ಯಾಚ್ ಬಳಕೆಯನ್ನು ಆರೋಗ್ಯ ಇಲಾಖೆ ತಕ್ಷಣವೇ ಅಮಾನತುಗೊಳಿಸಿದೆ ಮತ್ತು ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ. ಆದಾಗ್ಯೂ, ಅದೇ ವೈಲ್‌ನಿಂದ (Vial) ಲಸಿಕೆ ಪಡೆದಿದ್ದ ಇತರ ಆರು ಜನರಲ್ಲಿ (ನಾಲ್ವರು ಗರ್ಭಿಣಿಯರು ಸೇರಿದಂತೆ) ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಾಸಿಕ್ ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಜಯ್ ದೇವ್ಕರ್ ಮಾತನಾಡಿ, “ಟಿಡಿ ಲಸಿಕೆಗಳನ್ನು ಹದಿಹರೆಯದವರು ಮತ್ತು ಗರ್ಭಿಣಿಯರಿಗೆ ಸುರಕ್ಷಿತವಾಗಿ ನೀಡಲಾಗುತ್ತದೆ. ನಾಸಿಕ್ ಒಂದರಲ್ಲೇ ವಾರ್ಷಿಕವಾಗಿ 30,000 ಕ್ಕೂ ಹೆಚ್ಚು ಗರ್ಭಿಣಿಯರು ಮತ್ತು ಅಷ್ಟೇ ಸಂಖ್ಯೆಯ ಯುವಕರು ಇದನ್ನು ಪಡೆಯುತ್ತಾರೆ. ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಮತ್ತು ಫೋರೆನ್ಸಿಕ್ ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ” ಎಂದು ಹೇಳಿದ್ದಾರೆ. ಸಾರ್ವಜನಿಕರು ಮತ್ತು ಮಾಧ್ಯಮಗಳು ಯಾವುದೇ ಅಪಪ್ರಚಾರ ಅಥವಾ ಸುಳ್ಳು ವರದಿಗಳನ್ನು ಹರಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅಂಬಾಡ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಸಂಯೋಜಕರು ಮತ್ತು AEFI ಸಮಿತಿ ತನಿಖೆಯನ್ನು ಕೈಗೆತ್ತಿಕೊಂಡಿದೆ.

Share

Leave a comment

Leave a Reply

Your email address will not be published. Required fields are marked *

Related Articles