ದಾವಣಗೆರೆ: ಪ್ರೌಢ ಶಾಲೆಯ 9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪದವಿಪೂರ್ವ ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು ಕರಡು ನಿಯಮಗಳು-2026 ಅನ್ನು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಪ್ರಾಂಶುಪಾಲರ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸಿವೆ.
ಸರ್ಕಾರದ ಈ ಏಕಪಕ್ಷೀಯ ತೀರ್ಮಾನವು ವಿದ್ಯಾರ್ಥಿಗಳ ಭವಿಷ್ಯದ ಮೇಲಿನ ನೇರ ದಾಳಿಯಾಗಿದ್ದು, ಇದರ ವಿರುದ್ಧ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ರಾಜ್ಯಮಟ್ಟದ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಡು ತಿದ್ದುಪಡಿಯು ಶೈಕ್ಷಣಿಕ ಹಿತದೃಷ್ಟಿಯಿಂದಲೂ ಸಮರ್ಥನೀಯವಲ್ಲ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ ಮತ್ತು ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-೨೦೨೩ರ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರವು ಯಾವುದೇ ತಜ್ಞರು, ಉಪನ್ಯಾಸಕರು ಅಥವಾ ಪೋಷಕರೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ಪ್ರಕಟಿಸಿದೆ. ಇದು ಪದವಿಪೂರ್ವ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಅಧಿಕಾರಿಶಾಹಿಗಳ ಆಡಳಿತಾತ್ಮಕ ಪ್ರಯೋಗದ ಹುನ್ನಾರವಾಗಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ವಿಶೇಷವಾಗಿ ನೇಮಕಗೊಂಡಿರುವ ಉಪನ್ಯಾಸಕರು ಗೆಜೆಟೆಡ್ ಗ್ರೂಪ್-ಬಿ ಶ್ರೇಣಿಯ ಶೈಕ್ಷಣಿಕ ವೃಂದದವರಾಗಿದ್ದಾರೆ. ಅವರನ್ನು ಪ್ರೌಢಶಾಲೆಗಳಿಗೆ ನಿಯೋಜಿಸುವುದರಿಂದ ಅವರ ವೃಂದದ ಸ್ವರೂಪ ಮತ್ತು ಸೇವಾ ಘನತೆಗೆ ಧಕ್ಕೆ ಉಂಟಾಗುವುದಲ್ಲದೆ, ಗ್ರಾಮೀಣ ಹಾಗೂ ಹಿಂದುಳಿದ ವರ್ಗಗಳ ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಗುಣಮಟ್ಟದ ಶಿಕ್ಷಣ ಮತ್ತು ನೀಟ್, ಜೆಇಇ, ಸಿಇಟಿ ಪರೀಕ್ಷೆಗಳ ಉಚಿತ ತರಬೇತಿ ಹಾಗೂ ಮಾರ್ಗದರ್ಶನ ಕುಂಠಿತಗೊಳ್ಳಲಿದೆ. ಪ್ರೌಢಶಿಕ್ಷಣದಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಸರ್ಕಾರ ತಕ್ಷಣವೇ ನೇರ ನೇಮಕಾತಿ ಅಥವಾ ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕೇ ಹೊರತು, ಒಂದು ವೃಂದದ ಕೊರತೆಯನ್ನು ನೀಗಿಸಲು ಮತ್ತೊಂದು ವಿಶೇಷ ವೃಂದವನ್ನು ದುರ್ಬಲಗೊಳಿಸುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ಒತ್ತಿಹೇಳಲಗಿದೆ.
ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಎಲ್ಲಾ ೩೪ ಶೈಕ್ಷಣಿಕ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಈ ಕರಡು ನಿಯಮಗಳ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಮತ್ತು ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ. ಬೇಡಿಕೆಗಳು ಈಡೇರದಿದ್ದಲ್ಲಿ ರಾಜ್ಯಾದ್ಯಂತ ಬಲಿಷ್ಠ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕರಡು ನಿಯಮಗಳನ್ನು ತಕ್ಷಣ ಹಿಂಪಡೆಯಬೇಕು, ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ರಕ್ಷಿಸಬೇಕು ಮತ್ತು ಶಿಕ್ಷಣ ತಜ್ಞರನ್ನೊಳಗೊಂಡ ತ್ರಿಪಕ್ಷೀಯ ಸಮಾಲೋಚನೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಕಾತ್ರಿಕೆಹಟ್ಟಿ, ಪ್ರಧಾನ ಸಂಘಟನಾ ಕಾರ್ಯದರ್ಶಿ ಮಲ್ಲೇಶಪ್ಪ ಪತ್ರಿಕಾ ಹೇಳಿಕೆಯಲ್ಲಿ ಜಂಟಿಯಾಗಿ ಆಗ್ರಹಿಸಿದ್ದಾರೆ.
- DAVANAGERE NEWS
- Draft rules 2026
- Education department circular
- Freedom park dharna
- High school deployment opposition
- Karnataka education department
- PU lecturers association
- PU lecturers protest
- ಕರಡು ನಿಯಮಗಳು 2026
- ಕರ್ನಾಟಕ ಶಿಕ್ಷಣ ಇಲಾಖೆ
- ದಾವಣಗೆರೆ ಸುದ್ದಿ
- ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘ
- ಪಿಯು ಉಪನ್ಯಾಸಕರ ಪ್ರತಿಭಟನೆ
- ಪ್ರೌಢಶಾಲೆ ನಿಯೋಜನೆ ವಿರೋಧ
- ಫ್ರೀಡಂ ಪಾರ್ಕ್ ಧರಣಿ
- ಶೈಕ್ಷಣಿಕ ವೃಂದ





Leave a comment