Home ದಾವಣಗೆರೆ ಬಸವ ಭಕ್ತರಿಗೆ ‘ಬಸವ ತಾಲಿಬಾನಿ’ ನಿಂದನೆ: ಜೂನ್ 25ರ ನಾಳೆ ದಾವಣಗೆರೆ ಬಂದ್ ಮಾದರಿ ಪ್ರತಿಭಟನೆಗೆ ಕರೆ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ಬಸವ ಭಕ್ತರಿಗೆ ‘ಬಸವ ತಾಲಿಬಾನಿ’ ನಿಂದನೆ: ಜೂನ್ 25ರ ನಾಳೆ ದಾವಣಗೆರೆ ಬಂದ್ ಮಾದರಿ ಪ್ರತಿಭಟನೆಗೆ ಕರೆ!

Share
ದಾವಣಗೆರೆ
Share

ದಾವಣಗೆರೆ: ಬಸವ ಭಕ್ತರನ್ನು `ಬಸವ ತಾಲಿಬಾನಿ’ ಎಂದು ನಿಂದಿಸಿ ಅಪಮಾನಿಸಿರುವ ಕನ್ಹೇರಿ ಮಠದ ಶ್ರೀಗಳ ವಿರುದ್ಧ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಜೂನ್ 25ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಯದೇವ ವತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಪ್ರತಿಭಟನೆಯ ನಂತರ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಎಸಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಘಟಕದ ಅಧ್ಯಕ್ಷರಾದ ಎಂ. ಶಿವಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತು, ಬಸವ ಬಳಗ, ಬಸವ ಧರ್ಮಪೀಠ ಹಾಗೂ ಬಸವ ಬ್ರಿಗೇಡ್ ಸೇರಿದಂತೆ ಹತ್ತಾರು ಸಂಘಟನೆಗಳ ಸಹಕಾರದೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ `ಬಸವ ಸಂಸ್ಕೃತಿ ಅಭಿಯಾನ’ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಯಶಸ್ಸಿನ ಬಳಿಕ ಕನ್ಹೇರಿ ಮಠದ ಶ್ರೀಗಳು ಮಠಾಧಿಪತಿಗಳನ್ನು ಮತ್ತು ಬಸವಾಭಿಮಾನಿಗಳನ್ನು ಉದ್ದೇಶಿಸಿ ಹೀನ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಿದ್ದಾರೆ.

ಈ ಹಿಂದೆ ಶ್ರೀಗಳ ನಿಂದನೀಯ ವರ್ತನೆಯನ್ನು ವಿರೋಧಿಸಿ, ರಾಜ್ಯ ಸರ್ಕಾರವು ಅವರಿಗೆ ಮೂರು ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿತ್ತು. ಇದನ್ನು ಪ್ರಶ್ನಿಸಿ ಶ್ರೀಗಳು ನ್ಯಾಯಾಲಯದ ಮೊರೆ ಹೋಗಿದ್ದರಾದರೂ, ನ್ಯಾಯಾಲಯವು ಅವರಿಗೆ ಛೀಮಾರಿ ಹಾಕಿ, `ಮೊದಲು ನಿಮ್ಮ ಭಾಷೆಯನ್ನು ಸರಿಪಡಿಸಿಕೊಳ್ಳಿ’ ಎಂದು ಎಚ್ಚರಿಕೆ ನೀಡಿತ್ತು ಎಂದಿದ್ದಾರೆ.

ನ್ಯಾಯಾಲಯದ ಎಚ್ಚರಿಕೆಯ ಹೊರತಾಗಿಯೂ, ಕನ್ಹೇರಿ ಶ್ರೀಗಳು ಕೆಲವು ಸಂಘಟನೆಗಳೊಂದಿಗೆ ಸೇರಿಕೊಂಡು ಬಸವಾದಿ ಶರಣರ ಹಿಂದೂ ಸಮಾವೇಶ’ ಎಂಬ ಕಾರ್ಯಕ್ರಮ ನಡೆಸಿ, ಮತ್ತೊಮ್ಮೆ ಬಸವಾಭಿಮಾನಿಗಳನ್ನು ಬಸವ ತಾಲಿಬಾನಿಗಳು’ ಎಂದು ವಿವಿಧ ವೇದಿಕೆಗಳಲ್ಲಿ ನಿಂದಿಸುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಸಮಾಜದಲ್ಲಿ ಶಾಂತಿ ಕದಡುತ್ತಿರುವ ಶ್ರೀಗಳ ವಿರುದ್ಧ ಸರ್ಕಾರ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇವರ ವಿರುದ್ಧ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಂ. ಶಿವಕುಮಾರ್ ಎಚ್ಚರಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *