ಕ್ವೆಟ್ಟಾ (ಪಾಕಿಸ್ತಾನ): ಬಲೋಚಿಸ್ತಾನ ಪ್ರಾಂತ್ಯದಲ್ಲಿ ಕಾನೂನುಬಾಹಿರ ಕೊಲೆಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿ ಜಾಗತಿಕ ಗಮನ ಸೆಳೆದಿದ್ದ ಪ್ರಮುಖ ಮಹಿಳಾ ಹೋರಾಟಗಾರ್ತಿ, ‘ಬಲೋಚಿಸ್ತಾನದ ಸಿಂಹಿಣಿ’ ಎಂದೇ ಖ್ಯಾತರಾದ ಡಾ. ಮಾಹ್ರಂಗ್ ಬಲೋಚ್ (Mahrang Baloch) ಮತ್ತು ಬಲೋಚ್ ಯಕ್ಜೆಹ್ತಿ ಸಮಿತಿ (BYC) ನಾಯಕ ಸಿಬ್ಗತುಲ್ಲಾ ಶಾ ಅವರಿಗೆ ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯವು (ATC) ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ.
ಪ್ರತಿಭಟನೆ ಮತ್ತು ಪ್ರಕರಣದ ಹಿನ್ನೆಲೆ:
2024ರ ಜುಲೈನಲ್ಲಿ ಗ್ವಾದರ್‌ನಲ್ಲಿ ಬಿವೈಸಿ (BYC) ಆಯೋಜಿಸಿದ್ದ ‘ಬಲೋಚ್ ರಾಜಿ ಮಾಚಿ’ ಬೃಹತ್ ರ‍್ಯಾಲಿ ಮತ್ತು ಧರಣಿ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಧೀಶ ಮುಹಮ್ಮದ್ ಅಲಿ ಮೊಬಿನ್ ನೇತೃತ್ವದ ಕ್ವೆಟ್ಟಾ ಉಗ್ರ ನಿಗ್ರಹ ನ್ಯಾಯಾಲಯವು ಈ ಕಠಿಣ ತೀರ್ಪು ನೀಡಿದೆ.
ವಿಚಾರಣೆ ಬಹಿಷ್ಕರಿಸಿದ್ದ ನಾಯಕರು:
ಈ ಕಾನೂನು ಪ್ರಕ್ರಿಯೆಯನ್ನು “ರಾಜಕೀಯ ಪ್ರೇರಿತ ಮತ್ತು ಮುಂಚಿತವಾಗಿಯೇ ನಿರ್ಧರಿಸಲಾದ ಶಿಕ್ಷೆ” ಎಂದು ಕರೆದಿರುವ ಮಾಹ್ರಂಗ್ ಬಲೋಚ್ ಮತ್ತು ಅವರ ವಕೀಲರ ತಂಡ ಜೂನ್ 12 ರಿಂದಲೇ ನ್ಯಾಯಾಲಯದ ಕಲಾಪಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿದ್ದರು. ಕ್ವೆಟ್ಟಾದ ಜಿಲ್ಲಾ ಜೈಲಿನಲ್ಲೇ ಇದ್ದುಕೊಂಡು ಸರ್ಕಾರದ ನಡೆಗಳ ವಿರುದ್ಧ ಧರಣಿ ನಡೆಸುತ್ತಿದ್ದರು. ಸರ್ಕಾರ ನೇಮಿಸಿದ್ದ ಸರ್ಕಾರಿ ವಕೀಲರ ವಾದವನ್ನೂ ಇವರು ತಿರಸ್ಕರಿಸಿದ್ದರು. ಮಾಹ್ರಂಗ್ ಸೋದರಿ ನಾಡಿಯಾ ಬಲೋಚ್ ಈ ತೀರ್ಪನ್ನು “ಮುಖವಿಲ್ಲದ ನ್ಯಾಯಾಲಯದ ದಬ್ಬಾಳಿಕೆ” ಎಂದು ಖಂಡಿಸಿದ್ದಾರೆ.
ಯಾರು ಈ ಮಾಹ್ರಂಗ್ ಬಲೋಚ್?
ವೃತ್ತಿಯಿಂದ ಶಸ್ತ್ರಚಿಕಿತ್ಸಕರಾಗಿರುವ (Surgeon) 32 ವರ್ಷದ ಮಾಹ್ರಂಗ್ ಬಲೋಚ್, ಬಲೋಚಿಸ್ತಾನದಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧದ ಹೋರಾಟದ ಪ್ರಮುಖ ಮುಖವಾಗಿದ್ದಾರೆ. 2009ರಲ್ಲಿ ಇವರ ತಂದೆಯನ್ನು ಪಾಕ್ ಗುಪ್ತಚರ ಸಂಸ್ಥೆಗಳು ಅಪಹರಿಸಿ, ಚಿತ್ರಹಿಂಸೆ ನೀಡಿ ಕೊಂದಿದ್ದವು. ತದನಂತರ ಸಹೋದರನನ್ನೂ ಅಪಹರಿಸಲಾಗಿತ್ತು. ಈ ವೈಯಕ್ತಿಕ ದುರಂತಗಳ ಬಳಿಕ ಹೋರಾಟಕ್ಕೆ ಧುಮುಕಿದ ಮಾಹ್ರಂಗ್, 2023ರಲ್ಲಿ ತುರ್ಬತ್‌ನಿಂದ ಇಸ್ಲಾಮಾಬಾದ್‌ವರೆಗೆ 1,600 ಕಿಲೋಮೀಟರ್ ಉದ್ದದ ಐತಿಹಾಸಿಕ ಪಾದಯಾತ್ರೆ ನಡೆಸಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇವರ ಹೋರಾಟವನ್ನು ಗುರುತಿಸಿ ಬಿಬಿಸಿ (BBC) ಇವರನ್ನು ‘100 ಪ್ರಭಾವಿ ಮಹಿಳೆಯರು’ ಹಾಗೂ ಟೈಮ್ಸ್ ನಿಯತಕಾಲಿಕೆಯು ‘ಟೈಮ್ 100 ನೆಕ್ಸ್ಟ್’ ಪಟ್ಟಿಗೆ ಸೇರಿಸಿತ್ತು.
ಈ ತೀರ್ಪು ಬಲೋಚ್ ಸಮುದಾಯದಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಪಾಕಿಸ್ತಾನ ಸರ್ಕಾರದ ವಿರುದ್ಧದ ನಾಗರಿಕ ಹೋರಾಟ ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
- Baloch Yakjehti Committee
- Balochistan human rights activist
- BYC
- Gwadar rally case
- Mahrang Baloch
- Mahrang Baloch sentenced to life
- Pakistan Anti Terror Court
- Quetta ATC verdict
- Sibghatullah Shah
- ಕ್ವೆಟ್ಟಾ ನ್ಯಾಯಾಲಯ
- ಗ್ವಾದರ್ ರ‍್ಯಾಲಿ
- ಪಾಕಿಸ್ತಾನ ಉಗ್ರ ನಿಗ್ರಹ ನ್ಯಾಯಾಲಯ
- ಪಾಕಿಸ್ತಾನ ಸೇನೆ ದೌರ್ಜನ್ಯ
- ಬಲೋಚಿಸ್ತಾನ ಹೋರಾಟ
- ಬಲೋಚಿಸ್ತಾನದ ಸಿಂಹಿಣಿ
- ಬಿವೈಸಿ ಪ್ರತಿಭಟನೆ
- ಮಾಹ್ರಂಗ್ ಬಲೋಚ್ ಜೀವಾವಧಿ ಶಿಕ್ಷೆ
- ಸಿಬ್ಗತುಲ್ಲಾ ಶಾ





Leave a comment