ನವದೆಹಲಿ: ಭಾರತದಲ್ಲಿ ಹಿಂದೂಗಳನ್ನು ಇನ್ನು ಮುಂದೆ ಬಹುಸಂಖ್ಯಾತರು ಎಂದು ಪರಿಗಣಿಸಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸದಸ್ಯ ಮೌಲಾನಾ ಸಜ್ಜಾದ್ ನೊಮಾನಿ ಹೇಳಿಕೆ ನೀಡಿರುವುದು ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ.
ವಿವಿಧ ಸಮುದಾಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಿದಾಗ ಹಿಂದೂಗಳು ದೇಶದಲ್ಲಿ ಬಹುಸಂಖ್ಯಾತರಾಗಿ ಉಳಿದಿಲ್ಲ ಎಂದು ನೊಮಾನಿ ಪ್ರತಿಪಾದಿಸಿದ್ದಾರೆ. ಕಳೆದ 30 ವರ್ಷಗಳಿಂದ ಭಾರತದಾದ್ಯಂತ ಸಂಚರಿಸಿ ಜನರ ನಂಬಿಕೆ, ಧಾರ್ಮಿಕ, ಬುಡಕಟ್ಟು ಮತ್ತು ಜಾತಿ ಗುರುತುಗಳ ಕುರಿತು ಸಂಶೋಧನೆ ನಡೆಸಿರುವುದಾಗಿ ಹೇಳಿರುವ ಅವರು, ಪ್ರಸ್ತುತ ಇರುವ ಜನಸಂಖ್ಯಾ ಅಂಕಿ-ಅಂಶಗಳ ಗ್ರಹಿಕೆ ದಾರಿತಪ್ಪಿಸುವಂತಿದೆ ಎಂದಿದ್ದಾರೆ.
ಕಾಬಾದ ಪವಿತ್ರ ಕಪ್ಪು ಕಲ್ಲಿನ (ಹಜ್ರ್-ಎ-ಅಸ್ವದ್) ಮೇಲೆ ಕೈಯಿಟ್ಟು ಹೇಳುತ್ತೇನೆ, ಯಾವುದೇ ಪರಿಸ್ಥಿತಿಯಲ್ಲೂ ಹಿಂದೂಗಳನ್ನು ಬಹುಸಂಖ್ಯಾತರು ಎಂದು ಕರೆಯಲು ಸಾಧ್ಯವಿಲ್ಲ, ಅವರು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳಿದ್ದಾರೆ.
ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಹಿಂದೂಗಳಲ್ಲ ಎಂದು ವಾದಿಸಿರುವ ನೊಮಾನಿ, ಪರಿಶಿಷ್ಟ ಜಾತಿಗಳು (SC), ಬುಡಕಟ್ಟು ಸಮುದಾಯಗಳು, ತಮಿಳುನಾಡಿನ ಜನರು ಮತ್ತು ಲಿಂಗಾಯತರನ್ನು ಸಹ ಹಿಂದೂ ಜನಸಂಖ್ಯೆಯಲ್ಲಿ ಸೇರಿಸಬಾರದು ಎಂದು ಹೇಳಿದ್ದಾರೆ. ಬುಡಕಟ್ಟು ಜನಾಂಗದವರು ದೇಶದ ಮೂಲ ನಿವಾಸಿಗಳಾಗಿದ್ದು, ಅವರನ್ನು ಹಿಂದೂಗಳೆಂದು ವರ್ಗೀಕರಿಸಲು ಬಾರದು ಹಾಗೂ ಜಾಟ್ ಸಮುದಾಯದ ಕೆಲವು ಸದಸ್ಯರು ಕೂಡ ತಾವು ಹಿಂದೂಗಳಲ್ಲ ಎಂದು ಪ್ರತ್ಯೇಕ ಗುರುತು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಸ್ಲಿಮರು ಈ ಹಿಂದೆ ಹಿಂದೂಗಳನ್ನು ‘ಜಾತ್ಯತೀತ’ ಮತ್ತು ‘ಫ್ಯಾಸಿಸ್ಟ್’ ಎಂದು ವಿಂಗಡಿಸಿ ತಪ್ಪು ಮಾಡಿದರು, ಜಾತ್ಯತೀತ ಹಿಂದೂಗಳನ್ನು ನಂಬಿದ ಕಾರಣ ದೇಶವು ಫ್ಯಾಸಿಸ್ಟ್ ಶಕ್ತಿಗಳ ಕೈಗೆ ಸಿಲುಕುವಂತಾಯಿತು ಎಂದು ರಾಜಕೀಯ ವಿಶ್ಲೇಷಣೆ ಮಾಡಿದ್ದಾರೆ.





Leave a comment