ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಆಯೋಜಿಸಲು ಉದ್ದೇಶಿಸಿರುವ ‘ಪ್ರಥಮ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ’ದ ಎರಡನೇ ಪೂರ್ವಭಾವಿ ಸಭೆಯು ಶನಿವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಿತು.
ಸ್ತ್ರೀಪರ ಚಿಂತನೆಗಳಿಗೆ ಆದ್ಯತೆ:
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ತೊಗಲೇರಿ, “ಈ ಮಹಿಳಾ ಸಮ್ಮೇಳನವನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲೇ ಅದ್ಧೂರಿಯಾಗಿ ನಡೆಸಲಾಗುವುದು. ಸಮ್ಮೇಳನದಲ್ಲಿ ಹೆಚ್ಚಾಗಿ ಸ್ತ್ರೀ ಅಸ್ಮಿತೆ ಹಾಗೂ ಸ್ತ್ರೀ ಸಂವೇದನೆ ಮುಂತಾದ ಸ್ತ್ರೀಪರ ವಿಷಯಗಳಿಗೆ ಒತ್ತು ಕೊಡಲಾಗುವುದು. ಗೋಷ್ಠಿಗಳು ಮತ್ತು ಸರ್ವಾಧ್ಯಕ್ಷತೆಯ ನಿರ್ಧಾರವನ್ನು ಕಾರ್ಯಕಾರಿ ಸಮಿತಿಯಲ್ಲಿ ಅಂತಿಮಗೊಳಿಸಲಾಗುವುದು” ಎಂದರು.
ದಾನಿಗಳ ಸಹಕಾರಕ್ಕೆ ಮನವಿ:
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಕೆ. ರಾಘವೇಂದ್ರ ನಾಯರಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಯಾವುದೇ ಹಣಕಾಸು ನೆರವು ಸಿಗದೇ ಇರುವುದರಿಂದ ದಾನಿಗಳ ಮತ್ತು ಜಿಲ್ಲೆಯ ಮಹಿಳಾ ಸಂಘ-ಸಂಸ್ಥೆಗಳ ಸಹಕಾರದಿಂದಲೇ ಈ ಐತಿಹಾಸಿಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಮನವಿ ಮಾಡಿದರು.
ಎರಡು ದಿನಗಳ ಸಮ್ಮೇಳನದ ರೂಪುರೇಷೆ:
ಸಮ್ಮೇಳನದ ಸಂಚಾಲಕಿ ವೀಣಾ ಕೃಷ್ಣಮೂರ್ತಿ ಅವರು ಸಭೆಯ ತೀರ್ಮಾನಗಳನ್ನು ಹಂಚಿಕೊಳ್ಳುತ್ತಾ, “ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಎರಡು ಪ್ರಮುಖ ಗೋಷ್ಠಿಗಳು, ಕವಿಗೋಷ್ಠಿ, ವಿಶೇಷ ಉಪನ್ಯಾಸ, ಸಾಧಕ ಮಹಿಳೆಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು” ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ದಾವಣಗೆರೆ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ, ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಹೇಮಾ ಗಣೇಶ್ ಶೇಟ್, ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಶಿವಕುಮಾರ್, ಸಂಘಟಕಿ ಹೇಮಾ ಶಾಂತಪ್ಪ ಪೂಜಾರಿ, ಕನ್ನಡಪರ ಹೋರಾಟಗಾರ್ತಿ ಸುವರ್ಣಮ್ಮ ಶಿವಮೂರ್ತಿ, ಮಲ್ಲಮ್ಮ ನಾಗರಾಜ್, ಭೈರವೇಶ್ವರ, ಸಾಹಿತಿ ಓಂಕಾರಮ್ಮ ರುದ್ರಮುನಿಸ್ವಾಮಿ, ನಂದಿನಿ ಕಂಬಿನಾಳ್, ಅಖಿಲ ಭಾರತ ವೀರಶೈವ ಮಹಾಸಭಾದ ಕುಸುಮ ಲೋಕೇಶ್, ಸಾಮಾಜಿಕ ಹೋರಾಟಗಾರ್ತಿ ಬಿಂದು ರಾಂಪುರ, ಉಪನ್ಯಾಸಕಿ ವೀಣಾ ಪಿ., ಪತ್ರಕರ್ತೆ ರುದ್ರಮ್ಮ, ಪತ್ರಕರ್ತೆ ದೇವಿಕಾ, ಗಾಯತ್ರಿ ವಸ್ತ್ರದ್, ಸುನಂದಾ ವರ್ಣೇಕರ್, ಉಮಾದೇವಿ ಹಿರೇಮಠ, ವಕೀಲೆ ಸುಧಾ, ಮಂಜುಳಾ ಸುನಿಲ್, ನೂರ್ ಜಹಾನ್, ಗಾಯತ್ರಿ ಹಾಲೇಶ್, ಮಮತಾ ನಾಗರಾಜ್, ಸುಕನ್ಯಾ ಮತ್ತಿತರರು ಉಪಸ್ಥಿತರಿದ್ದರು.
- B Vamadevappa Togaleri
- Davanagere Kasapa
- DAVANAGERE NEWS
- Kannada literature news
- Kannada Sahitya Parishat Davanagere
- Kasapa meeting
- Womens Kannada Sahitya Sammelana
- Womens Literature Festival Davanagere
- ಕನ್ನಡ ಸಾಹಿತ್ಯ ಸಮ್ಮೇಳನ 2026
- ಕಸಾಪ ಪೂರ್ವಭಾವಿ ಸಭೆ
- ಕುವೆಂಪು ಕನ್ನಡ ಭವನ
- ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
- ದಾವಣಗೆರೆ ಸುದ್ದಿ
- ಬಿ ವಾಮದೇವಪ್ಪ ತೊಗಲೇರಿ
- ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ
- ಸ್ತ್ರೀ ಅಸ್ಮಿತೆ
- ಸ್ತ್ರೀ ಸಂವೇದನೆ






Leave a comment