Home ದಾವಣಗೆರೆ ಬಿಗ್ ಬ್ರೇಕಿಂಗ್: ಹೈದರಾಬಾದ್‌ನ ಐಷಾರಾಮಿ ವಿಲ್ಲಾದಲ್ಲಿ ಭರ್ಜರಿ ಕಳವು; 72 ಗಂಟೆಯೊಳಗೆ 8 ಕೆಜಿ ಚಿನ್ನ ಪತ್ತೆ ಹಚ್ಚಿದ ಸೈಬರಾಬಾದ್ ಪೊಲೀಸ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಬಿಗ್ ಬ್ರೇಕಿಂಗ್: ಹೈದರಾಬಾದ್‌ನ ಐಷಾರಾಮಿ ವಿಲ್ಲಾದಲ್ಲಿ ಭರ್ಜರಿ ಕಳವು; 72 ಗಂಟೆಯೊಳಗೆ 8 ಕೆಜಿ ಚಿನ್ನ ಪತ್ತೆ ಹಚ್ಚಿದ ಸೈಬರಾಬಾದ್ ಪೊಲೀಸ್!

Share
ಚಿನ್ನ
Share

ಹೈದರಾಬಾದ್: ಸೈಬರಾಬಾದ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದಿದ್ದ ಅತ್ಯಂತ ಹೈ-ಪ್ರೊಫೈಲ್ ವಿಲ್ಲಾ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಸೈಬರಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇವಲ 72 ಗಂಟೆಗಳ (3 ದಿನ) ಅವಧಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ನೇಪಾಳ ಮೂಲದ ಖತರ್ನಾಕ್ ಗ್ಯಾಂಗ್‌ನ ಮೂವರು ಸದಸ್ಯರನ್ನು ಬಂಧಿಸಿದ್ದು, ಕಳುವಾಗಿದ್ದ ಸುಮಾರು 8 ಕೆಜಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:

ಜೂನ್ 6 ರಂದು ಗಾಚಿಬೌಲಿಯ ಐಷಾರಾಮಿ ವಸತಿ ಸಮುಚ್ಚಯವಾದ ‘ಹಿಲ್ ರಿಡ್ಜ್ ವಿಲ್ಲಾಸ್’ನಲ್ಲಿ ಈ ದರೋಡೆ ನಡೆದಿತ್ತು. ವಿಲ್ಲಾದ ವೃದ್ಧ ದಂಪತಿಗಳು ಹೊರಗಡೆ ಹೋಗಿದ್ದ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಜೂನ್ 7 ರಂದು ದಂಪತಿ ಮನೆಗೆ ಮರಳಿದಾಗ ದೇವರ ಕೋಣೆಯಲ್ಲಿದ್ದ ಸಣ್ಣ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮರುದಿನ (ಜೂನ್ 8) ಅವರ ಮಗ ಮನೆಯೊಳಗಿನ ಮುಖ್ಯ ಲಾಕರ್ ತೆರೆದಾಗ, ಅದರಲ್ಲಿದ್ದ ಬರೋಬ್ಬರಿ 7.8 ಕೆಜಿ ಚಿನ್ನದ ಆಭರಣಗಳು ಮತ್ತು 1.3 ಕೆಜಿ ಬೆಳ್ಳಿ ವಸ್ತುಗಳು ಮಾಯವಾಗಿರುವುದು ಬೆಳಕಿಗೆ ಬಂದಿದೆ.

ಮನೆಗೆಲಸದವರೇ ಮಾಸ್ಟರ್ ಮೈಂಡ್!

ಪೊಲೀಸ್ ತನಿಖೆ ಆರಂಭವಾದಾಗ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ನೇಪಾಳ ಮೂಲದ ಮನೆಗೆಲಸದವರ ಮೇಲೆ ಅನುಮಾನ ವ್ಯಕ್ತವಾಗಿದೆ. ಕಳ್ಳರು ದಂಪತಿಯ ದಿನಚರಿ ಮತ್ತು ಓಡಾಟವನ್ನು ಸೂಕ್ಷ್ಮವಾಗಿ ಗಮನಿಸಿದ್ದರು. “ಆರೋಪಿಗಳು ಲಾಕರ್ ಪಕ್ಕದಲ್ಲೇ ಇಟ್ಟಿದ್ದ ಕೀಯನ್ನು ಪತ್ತೆಹಚ್ಚಿ, ಲಾಕರ್ ತೆರೆದು ಆಭರಣಗಳನ್ನು ದೋಚಿದ್ದಾರೆ. ಪೊಲೀಸರಿಗೆ ತಕ್ಷಣ ಅನುಮಾನ ಬಾರದಿರಲಿ ಎಂದು ಕದ್ದ ಬಳಿಕ ಲಾಕರ್ ಅನ್ನು ಮತ್ತೆ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದರು” ಎಂದು ಸೈಬರಾಬಾದ್ ಪೊಲೀಸ್ ಕಮಿಷನರ್ (ಸಿಪಿ) ಎಂ. ರಮೇಶ್ ತಿಳಿಸಿದ್ದಾರೆ.

ರಾಜ್ಯ ದಾಟಿದ ಪೊಲೀಸ್ ಕಾರ್ಯಾಚರಣೆ:

ಪ್ರಕರಣದ ಗಾಂಭೀರ್ಯವನ್ನು ಅರಿತ ಕಮಿಷನರ್ ಎಂ. ರಮೇಶ್ ಅವರು ವಿಶೇಷ ತನಿಖಾ ತಂಡಗಳನ್ನು ರಚಿಸಿ ಉತ್ತರ ಪ್ರದೇಶ, ಬಿಹಾರ ಮತ್ತು ಉತ್ತರಾಖಂಡ್‌ ರಾಜ್ಯಗಳಿಗೆ ರವಾನಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಇಂಟೆಲಿಜೆನ್ಸ್ ನೆರವಿನಿಂದ ಆರೋಪಿಗಳನ್ನು ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಬಿಲಾಸ್‌ಪುರ ರಸ್ತೆಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಕಮಲ್ ಶಾಹಿ (32), ಆತನ ಪತ್ನಿ ವಿಮಲಾ ಶಾಹಿ ಮತ್ತು ಕಲ್ಪನಾ ಶಾಹಿ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನೇಪಾಳ ಮೂಲದವರಾಗಿದ್ದಾರೆ.

ಐಷಾರಾಮಿ ವಿಲ್ಲಾಗಳೇ ಇವರ ಟಾರ್ಗೆಟ್:

ಪೊಲೀಸ್ ತನಿಖೆಯಲ್ಲಿ ಕಣ್ಣಿಡುವಂತಹ ಸತ್ಯವೊಂದು ಹೊರಬಿದ್ದಿದೆ. ಈ ಗ್ಯಾಂಗ್‌ನ ಮುಖ್ಯಸ್ಥ ಸುರೇಶ್ ಅಲಿಯಾಸ್ ಸೂರಜ್ ಎಂಬಾತ ನೇಪಾಳದಿಂದ ಜನರನ್ನು ಕರೆತಂದು, ಹೈದರಾಬಾದ್‌ನ ದೊಡ್ಡ ದೊಡ್ಡ ಗೇಟೆಡ್ ಕಮ್ಯುನಿಟಿ ಹಾಗೂ ಐಷಾರಾಮಿ ವಿಲ್ಲಾಗಳಲ್ಲಿ ಮನೆಗೆಲಸಕ್ಕೆ ಸೇರಿಸುತ್ತಿದ್ದನು. ನಂತರ ಅಲ್ಲಿನ ಮಾಲೀಕರು ಶ್ರೀಮಂತರೇ? ಅವರು ಯಾವಾಗ ಹೊರಗೆ ಹೋಗುತ್ತಾರೆ? ಎಂಬ ಸಂಪೂರ್ಣ ಮಾಹಿತಿ ಕಲೆಹಾಕಿ ಸ್ಕೆಚ್ ಹಾಕುತ್ತಿದ್ದರು.

ಸದ್ಯ ಪೊಲೀಸರು ಕಳುವಾಗಿದ್ದ 7.837 ಕೆಜಿ ಚಿನ್ನದ ಆಭರಣಗಳು, 1.361 ಕೆಜಿ ಬೆಳ್ಳಿ ಸಾಮಗ್ರಿಗಳು, ನಗದು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಗ್ಯಾಂಗ್ ಲೀಡರ್ ಸುರೇಶ್ ಮತ್ತು ಇತರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles