Home ಕ್ರೈಂ ನ್ಯೂಸ್ ₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ರಹಸ್ಯ ಸಾಮ್ರಾಜ್ಯ ಬಯಲು: ಕಣ್ಣು ಹಾಯಿಸಿದ ಕಡೆಯೆಲ್ಲಾ ಬಂಗಲೆ, ಸೈಟು, ಕೋಟಿ ಕೋಟಿ ಹಣ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರುವಾಣಿಜ್ಯ

₹6,000 ಸಂಬಳಕ್ಕೆ ಸೇರಿದ ಸರ್ಕಾರಿ ಇಂಜಿನಿಯರ್‌ ರಹಸ್ಯ ಸಾಮ್ರಾಜ್ಯ ಬಯಲು: ಕಣ್ಣು ಹಾಯಿಸಿದ ಕಡೆಯೆಲ್ಲಾ ಬಂಗಲೆ, ಸೈಟು, ಕೋಟಿ ಕೋಟಿ ಹಣ!

Share
ಸಂಬಳ
Share

ಒಡಿಶಾ: ಕೇವಲ 6,000 ರೂಪಾಯಿ ಮಾಸಿಕ ಸಂಬಳಕ್ಕೆ ಸರ್ಕಾರಿ ಸೇವೆಗೆ ಸೇರಿದ ಅಧಿಕಾರಿಯೊಬ್ಬನ ಆಸ್ತಿ ಮೌಲ್ಯ ಕಂಡು ಭ್ರಷ್ಟಾಚಾರ ನಿಗ್ರಹ ದಳದ (ವಿಜಿಲೆನ್ಸ್) ಅಧಿಕಾರಿಗಳೇ ದಂಗಾಗಿದ್ದಾರೆ. ಒಡಿಶಾದ ಕಾಂಧಮಾಲ್ ಜಿಲ್ಲೆಯ ಬಾಲಿಗುಡದ ಐಟಿಡಿಎ (ITDA) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವೈಕುಂಠ ನಾಥ್ ಬೆಹೆರಾ (Baikuntha Nath Behera) ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಏಕಕಾಲಕ್ಕೆ ಭರ್ಜರಿ ದಾಳಿ ನಡೆಸಿದ್ದಾರೆ.

ರಾಜ್ಯದ ಭುವನೇಶ್ವರ, ಬಾಲಾಸೋರ್, ಜಾಜ್‌ಪುರ ಮತ್ತು ಬಾಲಿಗುಡ ಸೇರಿದಂತೆ ಒಟ್ಟು 9 ಪ್ರಮುಖ ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಅಧಿಕಾರಿಯ ರಹಸ್ಯ ಆಸ್ತಿ ಸಾಮ್ರಾಜ್ಯ ಬಯಲಾಗಿದೆ.

ಲಾಕರ್‌ನಲ್ಲಿ ₹2 ಕೋಟಿಗೂ ಅಧಿಕ ನಗದು!

ವಿಜಿಲೆನ್ಸ್ ಅಧಿಕಾರಿಗಳು ಬೆಹೆರಾ ಮತ್ತು ಅವರ ಪತ್ನಿಯ ಹೆಸರಿನಲ್ಲಿದ್ದ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಿದಾಗ ಬರೋಬ್ಬರಿ ₹2 ಕೋಟಿಗೂ ಅಧಿಕ ನಗದು ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಲಾಗಿದೆ. ಇದಲ್ಲದೆ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ₹2.66 ಲಕ್ಷ ನಗದು ಸಿಕ್ಕಿದೆ. ನಗದು ಎಣಿಕೆಗಾಗಿ ಬ್ಯಾಂಕ್ ಯಂತ್ರಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

5 ಐಷಾರಾಮಿ ಬಂಗಲೆಗಳು, 14 ನಿವೇಶನಗಳು ಪತ್ತೆ:

ಆರೋಪಿ ಇಂಜಿನಿಯರ್ ಮತ್ತು ಆತನ ಕುಟುಂಬಸ್ಥರ ಹೆಸರಿನಲ್ಲಿ ಐಷಾರಾಮಿ ಆಸ್ತಿಗಳು ಪತ್ತೆಯಾಗಿವೆ:

ಭುವನೇಶ್ವರದ ನೀಲಾದ್ರಿ ವಿಹಾರದಲ್ಲಿ 10,500 ಚದರ ಅಡಿಯ 4 ಅಂತಸ್ತಿನ ಬೃಹತ್ ಕಟ್ಟಡ.

ಭುವನೇಶ್ವರ ಮತ್ತು ಜಾಜ್‌ಪುರದಲ್ಲಿ ಇನ್ನುಳಿದ 4 ಬಹುಮಹಡಿ ವಸತಿ ಕಟ್ಟಡಗಳು.

ಭುವನೇಶ್ವರದ ಪ್ರೈಮ್ ಲೊಕೇಶನ್‌ಗಳಲ್ಲಿ 8 ಸೈಟುಗಳು, ಜಾಜ್‌ಪುರದಲ್ಲಿ 5 ಮತ್ತು ಬರಿಪಾದದಲ್ಲಿ 1 ಸೇರಿದಂತೆ ಒಟ್ಟು 14 ದುಬಾರಿ ನಿವೇಶನಗಳು (Plots).

341 ಗ್ರಾಂ ಚಿನ್ನಾಭರಣ ಹಾಗೂ ₹45 ಲಕ್ಷಕ್ಕೂ ಅಧಿಕ ಮೊತ್ತದ ಬ್ಯಾಂಕ್ ಠೇವಣಿಗಳನ್ನು ತನಿಖಾ ತಂಡ ಪತ್ತೆ ಮಾಡಿದೆ.

₹6,000 ಇಂದ ಕೋಟಿ ಕೋಟಿ ಒಡೆಯ!

ಅಧಿಕೃತ ದಾಖಲೆಗಳ ಪ್ರಕಾರ ವೈಕುಂಠ ನಾಥ್ ಬೆಹೆರಾ ಅವರು 1999 ರಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆಗ ಅವರ ಆರಂಭಿಕ ಮಾಸಿಕ ಸಂಬಳ ಕೇವಲ ₹6,000 ಆಗಿತ್ತು. ವಿವಿಧ ಬುಡಕಟ್ಟು ಅಭಿವೃದ್ಧಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ, ಇತ್ತೀಚೆಗಷ್ಟೇ (2026ರ ಫೆಬ್ರವರಿಯಲ್ಲಿ) ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಗಿ ಬಡ್ತಿ ಪಡೆದಿದ್ದರು.

ಸದ್ಯ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ (Disproportionate Assets) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು, ತಾಂತ್ರಿಕ ತಜ್ಞರ ನೆರವಿನೊಂದಿಗೆ ಆಸ್ತಿಗಳ ನಿಜವಾದ ಮಾರುಕಟ್ಟೆ ಮೌಲ್ಯದ ಮೌಲ್ಯಮಾಪನ ಮಾಡುತ್ತಿದ್ದಾರೆ. ಇಂಜಿನಿಯರ್‌ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles