Home ದಾವಣಗೆರೆ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ: ನೂತನ ಶೈಕ್ಷಣಿಕ ವರ್ಷಕ್ಕೆ ಅದ್ಧೂರಿ ಚಾಲನೆ
ದಾವಣಗೆರೆಬೆಂಗಳೂರು

ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ: ನೂತನ ಶೈಕ್ಷಣಿಕ ವರ್ಷಕ್ಕೆ ಅದ್ಧೂರಿ ಚಾಲನೆ

Share
ಜಿ.ಎಂ. ವಿಶ್ವವಿದ್ಯಾಲಯ
Share

ದಾವಣಗೆರೆ : ನಗರದ ಪಿ.ಬಿ. ರಸ್ತೆಯಲ್ಲಿರುವ ಜಿ.ಎಂ. ವಿಶ್ವವಿದ್ಯಾಲಯದ ‘ಫ್ಯಾಕಲ್ಟಿ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ ವಿಭಾಗದ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿ.ಟೆಕ್. (B.Tech.) ತರಗತಿಗಳನ್ನು ಅದ್ಧೂರಿ ಚಾಲನೆ ನೀಡಲಾಯಿತಲ್ಲದೇ, ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮಕ್ಷಮದಲ್ಲಿ ಸೆಪ್ಟೆಂಬರ್ 7, 2026 ರ ಸೋಮವಾರದಂದು ವಿಶ್ವವಿದ್ಯಾಲಯದ ಜಿ.ಎಂ. ಕ್ವಾಡ್ರಂಗಲ್‌ನಲ್ಲಿ ಸ್ವಾಗತಿಸಲಾಯಿತು.

ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿದ್ದ ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ ಡಾ. ಎಂ. ವೇಣು ಗೋಪಾಲ ರಾವ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಸಾಂಪ್ರದಾಯಿಕ ಶೈಲಿಯ ಸುದೀರ್ಘ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ನೀರಸತೆ ಮತ್ತು ಆಯಾಸವನ್ನುಂಟು ಮಾಡುತ್ತವೆ ಎಂಬುದನ್ನು ಗಮನಿಸಿದ ವಿಶ್ವವಿದ್ಯಾಲಯವು, ಕೇವಲ ಸೈದ್ಧಾಂತಿಕ ಟಿಪ್ಪಣಿ ಬರೆಸುವ ವಿಧಾನವನ್ನು ಬದಿಗಿಟ್ಟು ಪ್ರಾಜೆಕ್ಟ್ ಆಧಾರಿತ ಕಲಿಕೆ ಪದ್ಧತಿಗೆ ಒತ್ತು ನೀಡುತ್ತಿದೆ. ಕುಲಾಧಿಪತಿಗಳಾದ ಜಿ.ಎಂ. ಲಿಂಗರಾಜು ಮತ್ತು ಕುಲಪತಿಗಳಾದ ಡಾ. ಎಸ್.ಆರ್. ಶಂಕಪಾಲ್ ಅವರ ಮಾರ್ಗದರ್ಶನದಲ್ಲಿ ನಮ್ಮ ಸಂಸ್ಥೆಯು ಹೊಸತನಕ್ಕೆ ಹೆಸರಾಗಿದೆ ಎಂದು ಸಂಸ್ಥೆಯ ನಾಯಕತ್ವ, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಮತ್ತು ವಿದ್ಯಾರ್ಥಿಗಳ ವೃತ್ತಿಪರ ಕೌಶಲ್ಯವನ್ನು ಹೆಚ್ಚಿಸಲು ಜಾರಿಗೆ ತರಲಾಗಿರುವ ಶೈಕ್ಷಣಿಕ ಸುಧಾರಣೆಗಳ ಬಗ್ಗೆ ವಿವರಿಸಿದರು.

ತಪ್ಪದೇ ‘ಪೋಷಕರ ಮತ್ತು ಶಿಕ್ಷಕರ ಸಭೆ’ಗೆ ಹಾಜರಾಗಬೇಕು. ಪರೀಕ್ಷಾ ಫಲಿತಾಂಶ ಬಂದ ನಂತರ ಚಿಂತಿಸುವುದಕ್ಕಿಂತ ಮುಂಚಿತವಾಗಿ ಗಮನಹರಿಸುವುದು ಸೂಕ್ತ. ನಮ್ಮ ವಿಶ್ವವಿದ್ಯಾಲಯದಲ್ಲಿ ನಾವೆಲ್ಲಾ ಕುಟುಂಬದ ಸದಸ್ಯರಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಶ್ರಮ ವಹಿಸುತ್ತಿದ್ದು, ಏನಾದರೂ ಶೈಕ್ಷಣಿಕ ಸೌಲಭ್ಯಗಳ ಅಗತ್ಯವಿದ್ದಲ್ಲಿ ನಮ್ಮ ಬಳಿಯೇ ನೇರವಾಗಿ ಚರ್ಚಿಸಿ ಎಂದು ಪೋಷಕರಿಗೆ ವಿನಂತಿಸಿದರು.

ಉದ್ಯೋಗ ಹುಡುಕುವವರಿಗಿಂತ ‘ಉದ್ಯೋಗ ಸೃಷ್ಟಿಕರ್ತರನ್ನು’ ರೂಪಿಸುವುದು ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿರುವ ಐಡಿಯಾ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆಗಳಿಗೆ ಮಾದರಿ ರೂಪ ನೀಡಿ, ಅದನ್ನು ಉದ್ಯಮವಾಗಿ ಪರಿವರ್ತಿಸಬಹುದು. ಇತ್ತೀಚೆಗೆ ಸಂಸ್ಥೆಯ 18 ವಿದ್ಯಾರ್ಥಿ ಯೋಜನೆಗಳು ವ್ಯಾಪಕ ಗುರುತಿಸುವಿಕೆ ಪಡೆದುಕೊಂಡಿವೆ. ವಿದ್ಯಾರ್ಥಿಗಳಿಗೆ ನವೋದ್ಯಮ (Startup) ಪ್ರಾರಂಭಿಸಲು ಮಾರ್ಗದರ್ಶನ ನೀಡಲು ಪ್ರಾದೇಶಿಕ ಉದ್ಯಮಿಗಳನ್ನು ಆಹ್ವಾನಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳು ನಶಿಸುತ್ತವೆ ಎಂಬ ಭಯ ಬೇಡ, ಬದಲಿಗೆ ಅದನ್ನು ತಮ್ಮ ಕೆಲಸದ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ತಂತ್ರಜ್ಞಾನವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಸುನೀಲ್ ಕುಮಾರ್ ಬಿ.ಎಸ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ದಿವಂಗತ ಜಿ. ಮಲ್ಲಿಕಾರ್ಜುನಪ್ಪ ಅವರ ಗ್ರಾಮೀಣ ಮತ್ತು ಮಧ್ಯ ಕರ್ನಾಟಕದ ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ತಾಂತ್ರಿಕ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ದೂರದೃಷ್ಟಿಯ ಕನಸಿನಿಂದ 2001ರಲ್ಲಿ ಜಿಎಂ ತಾಂತ್ರಿಕ ಸಂಸ್ಥೆ (GMIT) ಪ್ರಾರಂಭವಾಯಿತು. 180 ವಿದ್ಯಾರ್ಥಿಗಳೊಂದಿಗೆ ಕೇವಲ ಮೂರು ತಾಂತ್ರಿಕ ವಿಭಾಗಗಳಿಂದ ಆರಂಭಗೊಂಡ ಈ ಸಂಸ್ಥೆಯು, ಇಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಸ್ಮರಿಸಿದರು.

2020ರ ಕೋವಿಡ್ ಸಮಯದಲ್ಲಿ ಸಂಸ್ಥೆಗೆ ದಾಖಲಾತಿ ಪಡೆಯಲು ಸುಮಾರು 2,500ರಿಂದ 3,000 ವಿದ್ಯಾರ್ಥಿಗಳು ಆಸಕ್ತಿ ತೋರಿಸಿದ್ದರಿಂದ, ಹೆಚ್ಚುವರಿ ಸೀಟುಗಳ ಅಗತ್ಯ ಕಂಡುಬಂದಿತು. ಈ ಹಿನ್ನೆಲೆಯಲ್ಲಿ UGC ಹಾಗೂ ಕರ್ನಾಟಕ ಸರ್ಕಾರದ (KSHEC) ನಿಯಮಾವಳಿಗಳಡಿ ಜಿಎಂ ವಿಶ್ವವಿದ್ಯಾಲಯವಾಗಿ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಯಿತು. 2023ರಲ್ಲಿ 11 ಕೋರ್ಸ್‌ಗಳು ಹಾಗೂ 1,200 ವಿದ್ಯಾರ್ಥಿಗಳ ಪ್ರವೇಶಾತಿ ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಿದ ವಿಶ್ವವಿದ್ಯಾಲಯವು, ಪ್ರಸ್ತುತ 82ಕ್ಕೂ ಹೆಚ್ಚು ವಿವಿಧ ಕೋರ್ಸ್‌ಗಳನ್ನು ಹೊಂದಿದ್ದು, 6,000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ ಎಂದು ಸಂಸ್ಥೆಯ ಹೆಗ್ಗುರುತುಗಳನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ಮುಂದಿಟ್ಟರು.

ದಾವಣಗೆರೆ ಮಾತ್ರವಲ್ಲದೆ, ಉತ್ತರ ಹಾಗೂ ದಕ್ಷಿಣ ಕರ್ನಾಟಕ, ನೆರೆಯ ರಾಜ್ಯಗಳು, ನೇಪಾಳ ಹಾಗೂ SAARC ದೇಶಗಳಿಂದಲೂ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೇ, ವಿಶ್ವವಿದ್ಯಾಲಯವು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ಯೋಗ ಹಾಗೂ ಕೌಶಲ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಹ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸತತವಾಗಿ ಬಹುಮಾನ ಮತ್ತು ಪದಕಗಳನ್ನು ಗೆದ್ದಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಯಾಂಪಸ್ ವಾತಾವರಣ, ಬೋಧನಾ ಪದ್ಧತಿ ಮತ್ತು ಸಂಸ್ಥೆಯ ಮೇಲಿರುವ ತಮ್ಮ ನಂಬಿಕೆ ಹಾಗೂ ನಿರೀಕ್ಷೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ಇದೇ ವೇಳೆ ‘ಫ್ಯಾಕಲ್ಟಿ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ’ಗೆ ಒಳಪಡುವ ೧೬ ವಿವಿಧ ವಿಭಾಗಗಳ ಮುಖ್ಯಸ್ಥರುಗಳನ್ನು ಪರಿಚಯಿಸಲಾಯಿತು.

ಕಾರ್ಯಕ್ರಮದ ಆಯೋಜಕರಾದ ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕರಾದ ಡಾ. ಪ್ರವೀಣ್ ಜೆ ಧನ್ಯವಾದ ಅರ್ಪಿಸಿದರು. ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಗಣೇಶ್ ಜಿ. ತಿಳ್ವೆ ನಿರೂಪಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles