Home ದಾವಣಗೆರೆಯಲ್ಲಿ ಇತಿಹಾಸದಲ್ಲೇ ಮೊದಲು: ಸುಪ್ರೀಂ ಕೋರ್ಟ್ ಕೇಸ್‌ಗೆ ‘ಸಮಾಧಾನ ಸಮಾರೋಹ’ದಲ್ಲಿ ₹6 ಲಕ್ಷ ಹೆಚ್ಚುವರಿ ಪರಿಹಾರದೊಂದಿಗೆ ಬಿಗ್ ರಿಲೀಫ್!
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆಯಲ್ಲಿ ಇತಿಹಾಸದಲ್ಲೇ ಮೊದಲು: ಸುಪ್ರೀಂ ಕೋರ್ಟ್ ಕೇಸ್‌ಗೆ ‘ಸಮಾಧಾನ ಸಮಾರೋಹ’ದಲ್ಲಿ ₹6 ಲಕ್ಷ ಹೆಚ್ಚುವರಿ ಪರಿಹಾರದೊಂದಿಗೆ ಬಿಗ್ ರಿಲೀಫ್!

Share
ದಾವಣಗೆರೆ
Share

ದಾವಣಗೆರೆ: ಜಿಲ್ಲೆಯ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿಗೆ, ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದ ದೀರ್ಘಕಾಲದ ಅಪಘಾತ ವಿಮಾ ಪರಿಹಾರದ ಪ್ರಕರಣವೊಂದನ್ನು ‘ಸಮಾಧಾನ ಸಮಾರೋಹ’ದಡಿ ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ.

ಈ ಮೂಲಕ ಕಕ್ಷಿದಾರರಿಗೆ ಹೈಕೋರ್ಟ್ ನೀಡಿದ್ದ ಮೊತ್ತಕ್ಕಿಂತ ಹೆಚ್ಚುವರಿಯಾಗಿ ₹6,00000 (ಆರು ಲಕ್ಷ ರೂಪಾಯಿ) ಪರಿಹಾರ ಕೊಡಿಸುವಲ್ಲಿ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಶಸ್ವಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ಡಿ.ಕೆ ಅವರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

2016 ರಲ್ಲಿ ದಾವಣಗೆರೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಾಹನ ಅಪಘಾತ ಪರಿಹಾರ ಕ್ಲೈಮ್ ಪ್ರಕರಣಕ್ಕೆ (MVC No: 856/2016) ಸಂಬಂಧಿಸಿದಂತೆ ಜಿಲ್ಲಾ ಸತ್ರ ನ್ಯಾಯಾಲಯವು ₹8,75,029 ಪರಿಹಾರ ನೀಡಿತ್ತು. ತದನಂತರ ಹೈಕೋರ್ಟ್ ಇದಕ್ಕೆ ಹೆಚ್ಚುವರಿಯಾಗಿ ₹4,53,473 ನೀಡಲು ಆದೇಶಿಸಿತ್ತು. ಆದರೆ ಈ ಮೊತ್ತ ಸಾಲದೆಂದು ಕಕ್ಷಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ (SLP No: 8750/2024) ಸಲ್ಲಿಸಿದ್ದರು.

ಪ್ರಸ್ತುತ ಹಮ್ಮಿಕೊಳ್ಳಲಾಗಿದ್ದ ಪೂರ್ವ ಸಂಧಾನ (Pre-conciliation) ಸಭೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಮಾನ್ಯ ಶ್ರೀ ರವಿ ಹೊಸಮನಿ ಅವರ ವರ್ಚುವಲ್ (VC) ಮಾರ್ಗದರ್ಶನದಲ್ಲಿ ವಿಮಾ ಕಂಪನಿ ಹಾಗೂ ಕಕ್ಷಿದಾರರ ನಡುವೆ ಸಮಾಲೋಚನೆ ನಡೆಸಲಾಯಿತು. ಅಂತಿಮವಾಗಿ ಹೈಕೋರ್ಟ್ ನೀಡಿದ್ದ ಮೊತ್ತವನ್ನು ಪರಿಷ್ಕರಿಸಿ ಒಟ್ಟು ₹6 ಲಕ್ಷ ಹೆಚ್ಚುವರಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಲಾಗಿದ್ದು, ಈ ಮೊತ್ತವನ್ನು ಮುಂಬರುವ ಆಗಸ್ಟ್ ತಿಂಗಳ ನಂತರ ವಿಮಾ ಕಂಪನಿಯು ನ್ಯಾಯಾಲಯದಲ್ಲಿ ಜಮಾ ಮಾಡಲಿದೆ.

ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ವಿಶೇಷ ಲೋಕ ಅದಾಲತ್:

ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ, ರಾಜಿ ಮಾಡಿಕೊಳ್ಳಲು ಯೋಗ್ಯವಾದ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ 2026 ರ ಆಗಸ್ಟ್ 21, 22 ಮತ್ತು 23 ರಂದು ವಿಶೇಷ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದಾವಣಗೆರೆ ಜಿಲ್ಲೆಗೆ ಸಂಬಂಧಪಟ್ಟ ಒಟ್ಟು 30 ಪ್ರಕರಣಗಳನ್ನು ಈ ವಿಶೇಷ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಲು ಗುರುತಿಸಲಾಗಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಲು ಅವಕಾಶ:

ಈ ಪ್ರಕರಣಗಳ ಎರಡೂ ಕಡೆಯ ಕಕ್ಷಿದಾರರಿಗೆ ಈಗಾಗಲೇ ಆಯಾ ವ್ಯಾಪ್ತಿಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೋಟಿಸ್‌ಗಳನ್ನು ಜಾರಿಗೊಳಿಸಲಾಗುತ್ತಿದೆ. ಕಕ್ಷಿದಾರರು ಒಂದು ವೇಳೆ ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿದ್ದು, ಅದಾಲತ್‌ಗೆ ಖುದ್ದಾಗಿ ಭೇಟಿ ನೀಡಲು ಸಾಧ್ಯವಾಗದಿದ್ದಲ್ಲಿ ಅವರಿಗಾಗಿ ವಿಡಿಯೋ ಕಾನ್ಫರೆನ್ಸ್ (VC Link) ಮೂಲಕ ಭಾಗವಹಿಸಲು ವಿಶೇಷ ಅವಕಾಶ ಕಲ್ಪಿಸಲಾಗಿದೆ.

“ಈ ಸಮಾಧಾನ ಸಮಾರೋಪ ಮಾದರಿಯ ಸಂಧಾನ ಪ್ರಕ್ರಿಯೆಯು ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಕೋರ್ಟ್ ಅಲೆಯುವ ಸಮಯ ಮತ್ತು ವೆಚ್ಚವನ್ನು ಉಳಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ನೋಟಿಸ್ ಪಡೆದಿರುವ ಕಕ್ಷಿದಾರರು ಆದಷ್ಟು ಬೇಗ ಸ್ಪಂದಿಸಿ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು” ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ವೇಲಾ ಡಿ.ಕೆ. ಅವರು ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *