ಬೆಳಗಾವಿ: “ಹೆತ್ತ ಕರುಳಿಗಿಂತ ಮಿಗಿಲಾದ ದೇವರಿಲ್ಲ” ಎಂಬ ಮಾತನ್ನು ಮರೆತು, ಸ್ವಂತ ತಾಯಿಯನ್ನೇ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಬಿಟ್ಟು ಪರಾರಿಯಾಗಿದ್ದ ಕಟುಕ ಮಗನಿಗೆ ಕೊನೆಗೂ ಸಾರ್ವಜನಿಕರು ಮತ್ತು ಕಾನೂನಿನ ಬಿಸಿ ತಟ್ಟಿದೆ.
ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಆತನಿಗೆ ತನ್ನ ತಪ್ಪಿನ ಅರಿವಾಗಿ ವೃದ್ಧ ತಾಯಿಯನ್ನು ಮರಳಿ ಮನೆಗೆ ಕರೆದೊಯ್ದಿದ್ದಾನೆ.
ಮೂರು ದಿನ ನರಕಯಾತನೆ ಪಟ್ಟ ತಾಯಿ!
ಕಳೆದ ಮೂರು ದಿನಗಳ ಹಿಂದೆ ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ವೃದ್ಧ ತಾಯಿಯೊಬ್ಬರನ್ನು ಅವರ ಸ್ವಂತ ಮಗನೇ ರಸ್ತೆಯ ಬದಿಯಲ್ಲಿ ಬಿಟ್ಟು ಗಾಡಿ ಹತ್ತಿ ಪರಾರಿಯಾಗಿದ್ದ. ದಿಕ್ಕು ತೋಚದ ಆ ವೃದ್ಧ ಜೀವಿ, ಕಡುಗತ್ತಲಲ್ಲಿ ಯಾರೂ ಇಲ್ಲದ ಆ ನಿರ್ಜನ ಪ್ರದೇಶದಲ್ಲೇ ಒಂದು ಇಡೀ ರಾತ್ರಿಯನ್ನು ಭಯ ಮತ್ತು ಹಸಿವಿನಿಂದ ಕಳೆದಿತ್ತು.
ಮರುದಿನ ಬೆಳಗ್ಗೆ ಸ್ಥಳೀಯರು ವೃದ್ಧೆಯನ್ನು ಗಮನಿಸಿ ವಿಚಾರಿಸಿದಾಗ, ಹೆತ್ತ ಮಗನೇ ತನಗೆ ಎಸಗಿದ ಕ್ರೌರ್ಯವನ್ನು ಆ ತಾಯಿ ಕಣ್ಣೀರಿಡುತ್ತಾ ಬಿಚ್ಚಿಟ್ಟಿದ್ದರು. ಈ ಕರುಣಾಜನಕ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಕಾನೂನಿನ ಬಿಸಿ ಮುಟ್ಟಿಸಿದ ವಕೀಲರು: ಸಿಕ್ಕಿಬಿದ್ದ ಕೆಎಸ್‌ಆರ್‌ಟಿಸಿ ನೌಕರ!
ಹಡೆದವ್ವನಿಗೆ ದ್ರೋಹ ಬಗೆದ ಆ ವ್ಯಕ್ತಿ ಸಾರಿಗೆ ಸಂಸ್ಥೆಯ (KSRTC) ನೌಕರನಾಗಿ ಕೆಲಸ ಮಾಡುತ್ತಿರುವ ಸಂತೋಷ್ ಕಟ್ಟಿ ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ವಕೀಲರಾದ ಮಲ್ಲಿಕಾರ್ಜುನ ಚೌಕಾಶಿ ಅವರು, ತಾಯಿಗೆ ದೌರ್ಜನ್ಯ ಎಸಗಿದ ಈ ನೌಕರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಚಿಕ್ಕೋಡಿ ವಿಭಾಗೀಯ ವ್ಯವಸ್ಥಾಪಕರಿಗೆ (Divisional Manager) ಅಧಿಕೃತವಾಗಿ ದೂರು ನೀಡಿದ್ದರು.
ಬಡ್ಡಿ ದಂಧೆಯ ಕರಾಳ ಮುಖ?
ಇಷ್ಟೇ ಅಲ್ಲದೆ, ಈ ಸಂತೋಷ್ ಕಟ್ಟಿ ಎಂಬ ನೌಕರ ತನ್ನ ಜೊತೆ ಕೆಲಸ ಮಾಡುವ ಸಹೋದ್ಯೋಗಿ ಸಾರಿಗೆ ನೌಕರರಿಗೂ ಅಕ್ರಮವಾಗಿ ಬಡ್ಡಿ ಹಣ ನೀಡಿ ಕಿರುಕುಳ ನೀಡುತ್ತಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಹೆತ್ತ ತಾಯಿಯನ್ನೇ ನಡುರಸ್ತೆಗೆ ತಳ್ಳಿದ ಈತನ ಅಸಲಿ ಮುಖ ಬಯಲಾಗುತ್ತಿದ್ದಂತೆ, ಈತನ ವಿರುದ್ಧ ಇಲಾಖಾ ಮಟ್ಟದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ತೀವ್ರ ಒತ್ತಾಯ ಹೇರಿದ್ದಾರೆ.
ಕೊನೆಗೂ ಮನೆ ಸೇರಿದ ಹಡೆದವ್ವ!
ನಾಲ್ಕೂ ಕಡೆಯಿಂದ ಒತ್ತಡ, ಇಲಾಖೆಯ ಕ್ರಮ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿದ ಮಗ ಸಂತೋಷ್, ಕೊನೆಗೂ ಮುನವಳ್ಳಿಗೆ ಬಂದು ತನ್ನ ತಾಯಿಯನ್ನು ಮರಳಿ ಮನೆಗೆ ಕರೆದೊಯ್ದಿದ್ದಾನೆ.
ನೆಟ್ಟಿಗರ ಆಕ್ರೋಶ:
“ಲಕ್ಷ ರೂಪಾಯಿ ಸಂಬಳ ಬರುವ ಸರ್ಕಾರಿ ಕೆಲಸದಲ್ಲಿದ್ದರೂ ಹೆತ್ತ ತಾಯಿಗೆ ಒಂದು ತುತ್ತು ಅನ್ನ ಹಾಕಲಾಗದ ಇಂತಹ ಮಕ್ಕಳು ಸಮಾಜಕ್ಕೆ ಕಂಟಕ. ಇವನಿಗೆ ಕೇವಲ ಎಚ್ಚರಿಕೆ ಸಾಲದು, ಇಲಾಖೆಯಿಂದ ತಕ್ಕ ಶಾಸ್ತಿಯಾಗಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
- Belagavi news
- Belagavi Viral Video
- Human Cruelty Case
- KSRTC Employee Santosh Katti
- Munavalli Incident
- Old Mother Left On Road
- Savadatti Belagavi
- Son Abandons Mother
- ಕರುಣಾಜನಕ ಘಟನೆ
- ಕೆಎಸ್‌ಆರ್‌ಟಿಸಿ ನೌಕರ ಸಂತೋಷ್ ಕಟ್ಟಿ
- ಬೆಳಗಾವಿ ಮಾನವೀಯತೆ
- ಬೆಳಗಾವಿ ಸುದ್ದಿ
- ಮಲ್ಲಿಕಾರ್ಜುನ ಚೌಕಾಶಿ ವಕೀಲರು
- ಮುನವಳ್ಳಿ ಘಟನೆ
- ವೃದ್ಧ ತಾಯಿ ಕೈಬಿಟ್ಟ ಮಗ
- ಸವದತ್ತಿ ತಾಲೂಕು





Leave a comment