Home ದಾವಣಗೆರೆ 2ನೇ ಮದುವೆಗೆ ವಿರೋಧಿಸಿದ್ದೇ ಮುಳುವಾಯ್ತಾ? ಮಹಿಳೆಯ ರಹಸ್ಯ ಕೊಲೆ: ದರೋಡೆ ನಾಟಕವೋ, ಸುಪಾರಿ ಕೃತ್ಯವೋ?
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

2ನೇ ಮದುವೆಗೆ ವಿರೋಧಿಸಿದ್ದೇ ಮುಳುವಾಯ್ತಾ? ಮಹಿಳೆಯ ರಹಸ್ಯ ಕೊಲೆ: ದರೋಡೆ ನಾಟಕವೋ, ಸುಪಾರಿ ಕೃತ್ಯವೋ?

Share
ಮದುವೆ
Share

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಕಂದವಾರ ಬಾಗಿಲು ಬಡಾವಣೆಯಲ್ಲಿ ವಿವಾಹಿತ ಮಹಿಳೆಯೊಬ್ಬಳ ನಿಗೂಢ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮನೆಯಲ್ಲಿ ಮಲಗಿದ್ದ ಪುಷ್ಪಲತಾ ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ, ಕೊರಳಿನಲ್ಲಿದ್ದ ಮಾಂಗಲ್ಯ ಸರದೊಂದಿಗೆ ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ಇದು ಕಳವು ಯತ್ನದ ವೇಳೆ ನಡೆದ ಕೃತ್ಯದಂತೆ ಬಿಂಬಿತವಾಗುತ್ತಿದ್ದರೂ, ಮೃತಳ ಪೋಷಕರು ಮಾತ್ರ ಇದು ಗಂಡನ ಮನೆಯವರೇ ಯೋಜಿತವಾಗಿ ಮಾಡಿಸಿರುವ ‘ಸುಪಾರಿ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮಧ್ಯರಾತ್ರಿ ನಡೆದಿದ್ದೇನು?

ಸ್ಥಳೀಯ ಮೇಸ್ತ್ರಿ ನರಸಿಂಹಮೂರ್ತಿ ಎಂಬುವರ ಮನೆಯಲ್ಲಿ ಈ ಭೀಕರ ಘಟನೆ ನಡೆದಿದೆ. ಕೃತ್ಯ ನಡೆದ ರಾತ್ರಿ ಪುಷ್ಪಲತಾ ಅವರ ಪತಿ ಭರತ್ ಹಾಗೂ ಕುಟುಂಬಸ್ಥರು ಕೇರಳದ ದೇವಸ್ಥಾನಕ್ಕೆ ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಪುಷ್ಪಲತಾ, ಅವರ ನಾದಿನಿ ಭವ್ಯ ಹಾಗೂ ಇಬ್ಬರು ಮಕ್ಕಳಿದ್ದರು.

ಮಧ್ಯರಾತ್ರಿ ಮನೆಗೆ ನುಗ್ಗಿದ ಅಪರಿಚಿತರು, ಕೋಣೆಯಲ್ಲಿದ್ದ ಪುಷ್ಪಲತಾ ಅವರ ಜೀವ ತೆಗೆದು ಮಾಂಗಲ್ಯ ಸರ ದೋಚಿದ್ದಾರೆ. ಇದೇ ವೇಳೆ ಪಕ್ಕದಲ್ಲೇ ಇದ್ದ ನಾದಿನಿ ಭವ್ಯ ಅವರ ಬಾಯಿಗೆ ಬಟ್ಟೆ ತುರುಕಿ, ಪ್ರಜ್ಞೆ ತಪ್ಪಿಸಲು ರಾಸಾಯನಿಕ ಸ್ಪ್ರೇ (Chemical Spray) ಮಾಡಿದ್ದಾರೆ ಎನ್ನಲಾಗಿದೆ. ತಡರಾತ್ರಿ ಮನೆಯಲ್ಲಿದ್ದ ವೃದ್ಧೆಯೊಬ್ಬರು ಎಚ್ಚರಗೊಂಡು ಕೋಣೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

ತಾಯಿಯ ಗಂಭೀರ ಆರೋಪ:

ಮೃತ ಪುಷ್ಪಲತಾ ಬೆಂಗಳೂರಿನ ಚುಂಚಘಟ್ಟದ ಮಹೇಶ್ ಮತ್ತು ಲಕ್ಷ್ಮೀ ದಂಪತಿಯ ಏಕೈಕ ಪುತ್ರಿ. ನಾಲ್ಕು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದ ಭರತ್ ಜೊತೆ ಇವರ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎನ್ನಲಾಗಿದೆ.

“ಇದು ದರೋಡೆಗಾಗಿ ನಡೆದ ಕೊಲೆಯಲ್ಲ. ನನ್ನ ಮಗಳನ್ನು ಗಂಡನ ಮನೆಯವರೇ ಸುಪಾರಿ ಕೊಟ್ಟು ಮುಗಿಸಿದ್ದಾರೆ!” — ಲಕ್ಷ್ಮೀ (ಮೃತಳ ತಾಯಿ)

ಪತಿ ಭರತ್ ಎರಡನೇ ಮದುವೆಗೆ ಸಿದ್ಧನಾಗುತ್ತಿದ್ದ ವಿಷಯ ತಿಳಿದು ಪುಷ್ಪಲತಾ ಈ ಹಿಂದೆ ಆತ್ಮಹತ್ಯೆಗೂ ಯತ್ನಿಸಿದ್ದರು ಎನ್ನಲಾಗಿದೆ. ಬಳಿಕ ಬೆಂಗಳೂರಿನ ಕೊಣನಕುಂಟೆ ಪೊಲೀಸರು ಎರಡೂ ಕುಟುಂಬಸ್ಥರನ್ನು ಕರೆಸಿ ರಾಜಿ ಸಂಧಾನ ನಡೆಸಿ ಪುಷ್ಪಲತಾ ಅವರನ್ನು ಗಂಡನ ಮನೆಗೆ ಕಳುಹಿಸಿದ್ದರು. ಆದರೆ, ಸಂಧಾನ ನಡೆದು ಬಂದ ಕೆಲವೇ ದಿನಗಳಲ್ಲಿ ಆಕೆ ನಿಗೂಢವಾಗಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಆರೋಪ ತಳ್ಳಿಹಾಕಿದ ಅತ್ತೆ:

ಇತ್ತ ಸೊಸೆಯ ಕಡೆಯವರ ಆರೋಪವನ್ನು ಅತ್ತೆ ವಿಜಯಲಕ್ಷ್ಮಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. “ಮದುವೆಯ ಎಲ್ಲಾ ಖರ್ಚನ್ನು ನಾವೇ ಭರಿಸಿ ವಿವಾಹ ಮಾಡಿಕೊಂಡಿದ್ದೆವು. ಭಿನ್ನಾಭಿಪ್ರಾಯದ ನಂತರ ಅವರಿಗಾಗಿಯೇ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದೆವು. ಹಾಗಿರುವಾಗ ನಾವು ಕಿರುಕುಳ ನೀಡಲು ಹೇಗೆ ಸಾಧ್ಯ? ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ತಮಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸದ್ಯ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಸಾಕ್ಷ್ಯ ಕಲೆಹಾಕುತ್ತಿದ್ದಾರೆ. ಇದು ಕೇವಲ ಚಿನ್ನದ ಸರಕ್ಕಾಗಿ ನಡೆದ ಕೃತ್ಯವೋ ಅಥವಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹತ್ಯೆಯೋ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಹೊರಬರಬೇಕಿದೆ.

Share

Leave a comment

Leave a Reply

Your email address will not be published. Required fields are marked *

Related Articles