Home ಕ್ರೈಂ ನ್ಯೂಸ್ ಅಜ್ಮೀರ್ ಭೀಕರ ಹತ್ಯಾಕಾಂಡ: ನಾಲ್ವರನ್ನು ಕೊಂದು, ಕಾರಿನಲ್ಲಿ ಶವ ಸುಟ್ಟು, ನಂತರ ಗೋಳಾಡಿದ ಮೊದಲ ಪತ್ನಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಜ್ಮೀರ್ ಭೀಕರ ಹತ್ಯಾಕಾಂಡ: ನಾಲ್ವರನ್ನು ಕೊಂದು, ಕಾರಿನಲ್ಲಿ ಶವ ಸುಟ್ಟು, ನಂತರ ಗೋಳಾಡಿದ ಮೊದಲ ಪತ್ನಿ!

Share
ಪತ್ನಿ
Share

ಅಜ್ಮೀರ್ (ರಾಜಸ್ಥಾನ): ಪ್ರೀತಿ, ದ್ವೇಷ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಶರಾಂಪುರ ಗ್ರಾಮದಲ್ಲಿ ಅತ್ಯಂತ ಭೀಕರ ಹತ್ಯಾಕಾಂಡವೊಂದು ನಡೆದಿದೆ.

ಮಾಜಿ ಸರಪಂಚ್ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿ, ಅದನ್ನು ಅಪಘಾತ ಎಂದು ಬಿಂಬಿಸಲು ಶವಗಳನ್ನು ಸ್ಕಾರ್ಪಿಯೋ ಕಾರಿನಲ್ಲಿಟ್ಟು ಸುಟ್ಟ ಹಾಕಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಈ ಇಡೀ ಕೃತ್ಯದ ಮಾಸ್ಟರ್ ಮೈಂಡ್ ಮೃತ ಸರಪಂಚ್‌ನ ಮೊದಲ ಪತ್ನಿಯೇ ಆಗಿರುವುದು ಇಡೀ ರಾಜ್ಯವನ್ನೇ ನಡುಗಿಸಿದೆ.

ಘಟನೆಯ ಹಿನ್ನೆಲೆ:

ಮೃತರನ್ನು ಮಾಜಿ ಕಾಂಗ್ರೆಸ್ ಸರಪಂಚ್ ರಾಮ್ ಸಿಂಗ್ ಚೌಧರಿ, ಅವರ ತಾಯಿ ಪೂಸಿ ದೇವಿ, ಎರಡನೇ ಪತ್ನಿ ಸೂರ್ಯಗ್ಯಾನ್ ದೇವಿ ಮತ್ತು ಸಂಬಂಧಿ ಮಹಿಳಾ ಚೌಧರಿ ಎಂದು ಗುರುತಿಸಲಾಗಿದೆ. ರಾಮ್ ಸಿಂಗ್ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈ ಎರಡನೇ ಮದುವೆಯ ವಿಚಾರವಾಗಿ ಮನೆಯಲ್ಲಿ ದೀರ್ಘಕಾಲದಿಂದ ತೀವ್ರ ಕೌಟುಂಬಿಕ ಕಲಹ ನಡೆಯುತ್ತಿತ್ತು. ಬುಧವಾರ ತಡರಾತ್ರಿ ಇವರ ನಡುವೆ ಗಲಾಟೆ ತಾರಕಕ್ಕೇರಿದೆ.

ಕ್ರೂರ ಹತ್ಯೆ ಮತ್ತು ನಾಟಕ:

ಕೋಪೋದ್ರಿಕ್ತಗೊಂಡ ಮೊದಲ ಪತ್ನಿ ಸುನಿತಾ ಚೌಧರಿ, ತನ್ನ 19 ವರ್ಷದ ಮಗಳು ಸರಿತಾ ಮತ್ತು ಅಪ್ರಾಪ್ತ ಮಗನೊಂದಿಗೆ ಸೇರಿ ನಾಲ್ವರ ಮೇಲೂ ತೀಕ್ಷ್ಣವಾದ ಕೃಷಿ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸಲು, ಮೂವರ ಶವಗಳನ್ನು ರಾಮ್ ಸಿಂಗ್ ಅವರದ್ದೇ ಸ್ಕಾರ್ಪಿಯೋ ಕಾರಿನೊಳಗೆ ಹಾಕಿ, ಮತ್ತೊಂದು ಶವವನ್ನು ಹತ್ತಿರದ ಜಮೀನಿನಲ್ಲಿ ಎಸೆದಿದ್ದಾರೆ. ನಂತರ ಟ್ರ್ಯಾಕ್ಟರ್‌ನಿಂದ ಡೀಸೆಲ್ ಕದ್ದು ಕಾರಿಗೆ ಸುರಿದು ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದ್ದಾರೆ.

ಬೆಳಗ್ಗೆ ಗ್ರಾಮಸ್ಥರು ಉರಿಯುತ್ತಿದ್ದ ಕಾರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಮನೆಯಲ್ಲಿ ಸುನಿತಾ ತನಗೇನೂ ತಿಳಿಯದಂತೆ ಊರಿನ ಮಹಿಳೆಯರ ಮಧ್ಯೆ ಕುಳಿತು ಎದೆ ಬಡಿದುಕೊಳ್ಳುತ್ತಾ, ಅಳುತ್ತಾ, ಪ್ರಜ್ಞೆ ತಪ್ಪಿದಂತೆ ನಟಿಸಿದ್ದಾಳೆ. ಪೊಲೀಸರು ಕೇಳಿದಾಗ, ಅತ್ತೆಗೆ ಎದೆನೋವು ಬಂದಿದ್ದರಿಂದ ಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದಾಳೆ.

ಪೊಲೀಸ್ ತನಿಖೆ:

ಮೊದಲಿಗೆ ಇದು ಭೀಕರ ಅಪಘಾತ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ಆದರೆ ವಿಧಿವಿಜ್ಞಾನ (Forensic) ತಂಡ ತಪಾಸಣೆ ನಡೆಸಿದಾಗ ಶವಗಳ ಮೇಲೆ ಆಯುಧಗಳಿಂದ ಇರಿದ ಗಾಯಗಳು ಪತ್ತೆಯಾಗಿವೆ. ಜೊತೆಗೆ ರಾಮ್ ಸಿಂಗ್ ಮನೆಯ ಮುಖ್ಯ ಕೋಣೆಯನ್ನು ಹೊಸದಾಗಿ ತೊಳೆದಿದ್ದರೂ ಅಲ್ಲಿ ರಕ್ತದ ಕಲೆಗಳು ಮತ್ತು ರಕ್ತಸಿಕ್ತ ಇಟ್ಟಿಗೆಗಳು ಪತ್ತೆಯಾಗಿವೆ. ಗ್ರಾಮಸ್ಥರ ಹೇಳಿಕೆ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನಿಂದ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಸುನಿತಾಳ ನಾಟಕ ಬಯಲಾಗಿದೆ. ಸದ್ಯ ಪೊಲೀಸರು ಸುನಿತಾ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *