ತಿರುವನಂತಪುರಂ: ಕೇರಳದ ಕರಾವಳಿ ಪ್ರದೇಶವಾದ ಮುನಂಬಂನ ವಕ್ಫ್ ಭೂಮಿ ವಿವಾದವು, ಕೇಂದ್ರ ಸರ್ಕಾರದ ‘ಉಮೀದ್’ (Umeed) ಪೋರ್ಟಲ್ನಲ್ಲಿ ವಿವಾದಿತ ಜಾಗವನ್ನು ವಕ್ಫ್ ಮಂಡಳಿ ನೋಂದಾಯಿಸಿದ ಬೆನ್ನಲ್ಲೇ ಮತ್ತಷ್ಟು ಕಾವೇರಿದೆ. ಈ ಬೆಳವಣಿಗೆಯು ರಾಜ್ಯದಲ್ಲಿ ಹೊಸ ರಾಜಕೀಯ ಮತ್ತು ಕೋಮು ಸಂಘರ್ಷಕ್ಕೆ ಕಾರಣವಾಗಿದೆ.
ಹಿಂದಿನ ಸರ್ಕಾರದ ಮೇಲೆ ಸಿಎಂ ಆರೋಪ:
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್, “ಹಿಂದಿನ ಎಡರಂಗ (LDF) ಸರ್ಕಾರದ ಅವಧಿಯಲ್ಲಿ ರಾಜಕೀಯವಾಗಿ ನೇಮಕಗೊಂಡಿದ್ದ ವಕ್ಫ್ ಮಂಡಳಿಯೇ ಈ ಕೃತ್ಯ ಎಸಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಿಪಿಐ(ಎಂ) ನೇತೃತ್ವದ ಹಿಂದಿನ ಸರ್ಕಾರವು ಸಂಘ ಪರಿವಾರದ ಅಜೆಂಡಾವನ್ನು ಮುನ್ನಡೆಸಲು ಮತ್ತು ಎರಡು ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಲು ಈ ನೋಂದಣಿ ಮಾಡಿಸಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ, ಮುನಂಬಂ ನಿವಾಸಿಗಳನ್ನು ಯಾರೂ ಒಕ್ಕಲೆಬ್ಬಿಸದಂತೆ ಕಾನೂನು ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದ್ದಾರೆ.
ಏನಿದು ಮುನಂಬಂ ವಿವಾದ?
ಎರ್ನಾಕುಲಂ ಜಿಲ್ಲೆಯ ಮುನಂಬಂ ಕರಾವಳಿಯ ಸುಮಾರು 404 ಎಕರೆ ಪ್ರದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು (ಹೆಚ್ಚಾಗಿ ಲ್ಯಾಟಿನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಮತ್ತು ಹಿಂದೂ ಮೀನುಗಾರರು) ತಲೆಮಾರುಗಳಿಂದ ವಾಸಿಸುತ್ತಿದ್ದಾರೆ. 1950ರಲ್ಲಿ ಮೊಹಮ್ಮದ್ ಸಿದ್ದಿಕ್ ಸೇಠ್ ಎಂಬುವವರು ಈ ಭೂಮಿಯನ್ನು ಕೋಳಿಕೋಡ್ನ ಫಾರೂಕ್ ಕಾಲೇಜು ಸಮಿತಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ದಾನ ಮಾಡಿದ್ದರು. ಕಾಲೇಜು ಆಡಳಿತ ಮಂಡಳಿಯು ಈ ಜಾಗವನ್ನು ಸ್ಥಳೀಯ ನಿವಾಸಿಗಳಿಗೆ ಮಾರಾಟ ಮಾಡಿತ್ತು. ಆದರೆ, 2019 ರಲ್ಲಿ ಕೇರಳ ವಕ್ಫ್ ಮಂಡಳಿಯು “ಒಮ್ಮೆ ವಕ್ಫ್ ಆದ ಆಸ್ತಿ ಶಾಶ್ವತವಾಗಿ ವಕ್ಫ್ ಆಸ್ತಿಯೇ ಆಗಿರುತ್ತದೆ, ಇದನ್ನು ಮಾರಾಟ ಮಾಡಲು ಬರುವುದಿಲ್ಲ” ಎಂದು ಹೇಳಿ ಇಡೀ ಜಾಗವನ್ನು ತನ್ನ ಹೆಸರಿಗೆ ನೋಂದಾಯಿಸಿಕೊಂಡಿತ್ತು. ಇದು ಸದ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಚರ್ಚ್ ಮತ್ತು ಬಿಜೆಪಿ ತೀವ್ರ ವಿರೋಧ:
ಕ್ಯಾಥೋಲಿಕ್ ಚರ್ಚ್ನ ಮುಖವಾಣಿಯಾದ ‘ದೀಪಿಕಾ’ ದಿನಪತ್ರಿಕೆಯು ವಕ್ಫ್ ಮಂಡಳಿಯ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದು, ಇದು ಜಾತ್ಯತೀತ ಕೇರಳಕ್ಕೆ ಒಡ್ಡಿದ ಸವಾಲು ಎಂದು ಕರೆದಿದೆ. ಮತ್ತೊಂದೆಡೆ, ಪ್ರತಿಪಕ್ಷ ಬಿಜೆಪಿ ನಾಯಕ ಕೆ. ಸುರೇಂದ್ರನ್ ಅವರು, “ಅಧಿಕಾರಕ್ಕೆ ಬಂದರೆ 10 ನಿಮಿಷದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಸತೀಶನ್ ಭರವಸೆ ನೀಡಿದ್ದರು, ಈಗ ಅದನ್ನು ಈಡೇರಿಸಲಿ” ಎಂದು ಸವಾಲು ಹಾಕಿದ್ದಾರೆ. ಆದರೆ, ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎಸ್. ಹಮ್ಜಾ ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಉಮೀದ್ ಪೋರ್ಟಲ್ನಲ್ಲಿ ನೋಂದಣಿ ಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ.





Leave a comment